

ಅಥಣಿ: ಅರಣ್ಯ ಇಲಾಖೆ ಸಹಯೋಗದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸಸಿ ನೆಡುವ ಮೂಲಕ ಪಟ್ಟಣವನ್ನು ಹಸಿರು ಸಿಟಿ ಮಾಡುವ ಯೋಜನೆ ನಮ್ಮದಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಸ್ವಾಮಿ ಬಡಾವಣೆಯ ಉದ್ಯಾನಕ್ಕೆ ಬುಧವಾರ ‘ಮಾತೃವನ’ ಎಂದು ನಾಮಕರಣ ಮಾಡಿ ಮಾತನಾಡಿ, ಮುಂದಿನ ಮೂರು ವರ್ಷದ ಅವಧಿಯಲ್ಲಿ ಅಥಣಿ ಕ್ಷೇತ್ರದಲ್ಲಿ ಲಕ್ಷಕ್ಕಿಂತ ಹೆಚ್ಚು ಸಸಿ ನೆಡುವ ಉದ್ದೇಶ ನಮ್ಮದಾಗಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಸಿ ದತ್ತು ನೀಡಲಾಗುವುದು. ವಿವಿಧ ಕ್ಷೇತ್ರದವರಿಗೂ ಸಸಿ ವಿತರಿಸಲಾಗುವುದು ಎಂದರು.
ಪುರಸಭೆ ಸದಸ್ಯ ರಾಜು ಗುಡೋಡಗಿ ಮಾತನಾಡಿ, ಪ್ರತಿಯೊಬ್ಬರು ತಾಯಿ ಹೆಸರಿನಲ್ಲಿ ಒಂದೊಂದು ಮರ ಬೆಳೆಸುವಂತಾಗಬೇಕು. ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯೊಂದಿಗೆ ಪ್ರತಿಯೊಬ್ಬರ ಸಹಭಾಗಿತ್ವವೂ ಅವಶ್ಯ ಎಂದರು.
ಅರಣ್ಯ ಇಲಾಖೆಯ ಆರ್‌ಎಫ್‌ಒ ಪ್ರಶಾಂತ ಗೌರಾಣಿ ಮಾತನಾಡಿ, ಸಸಿ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಡಾ.ರಾಮ ಕುಲಕರ್ಣಿ, ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸದಸ್ಯ ಮಲ್ಲೇಶ ಹುದ್ದಾರ, ಅಪ್ಪಾಸಾಹೇಬ ಅಡಹಳ್ಳಿ, ನರಸು ಬಡಕಂಬಿ, ಶಿವಾಜಿ ಮುಂಜೆ, ಶಿವಕುಮಾರ ತೆಲಸಂಗ, ರಾಜು ಡಾಲೆ, ಪ್ರವೀಣ ಅವಟಿಮಠ, ರಾಜು ಕಟ್ಟಿ, ದೀಪಕ ಟಿಕಾರೆ, ಸೈಯದ್ ಗಡ್ಡೇಕರ, ಎಸ್.ಎಸ್.ಪಾಟೀಲ, ಪ್ರವೀಣ ಕವಟಕೊಪ್ಪ ಇತರರಿದ್ದರು.