

ಕೋಲಾರ: ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ 134 ನೌಕರರಿಗೆ ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುತ್ತಿಗೆ ನೌಕರರು ವಿವಿಧ ಸಂಟನೆಗಳ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಗುತ್ತಿಗೆ ಪಡೆದಿರುವ ಮೆಟ್ರೋ ಸೆಕ್ಯುರಿಟಿ ಆ್ಯಂಡ್ ಅಲೈಡ್ ಸರ್ವೀಸಸ್ ಏಜೆನ್ಸಿ ಆರು ತಿಂಗಳಿಂದ ವೇತನ ನೀಡಿಲ್ಲ. ಕರೊನಾ ಸಂಕಷ್ಟ ಕಾಲದಲ್ಲೂ ಗುತ್ತಿಗೆ ನೌಕರರು ಸಂಬಳವಿಲ್ಲದೆ ಕರ್ತವ್ಯನಿರ್ವಹಿಸಿದ್ದು, ಏಜನ್ಸಿ ಸಂಸ್ಥೆ ಮಾನವೀಯತೆ ಮರೆತು ವರ್ತಿಸುತ್ತಿದೆ. ಹಾಗಾಗಿ ಆ ಸಂಸ್ಥೆ ವಿರುದ್ಧ ಸೂಕ್ತ ಪ್ರಮ ಕೈಗೊಂಡು ನೌಕರರಿಗೆ ಸಿಗಬೇಕಾದ ವೇತನ ಕೊಡಿಸಲು ಮುಂದಾಗಬೇಕೆಂದು ಜಿಪಂ ಅಧಿಕಾರವರ್ಗವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಸುಮಾರು ವರ್ಷದಿಂದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಹೊರಗುತ್ತಿಗೆ ಹೆಸರಿನ ಮೆಟ್ರೋ ಸೆಕ್ಯುರಿಟಿ ಆ್ಯಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯವರು ವೇತನ ನೀಡದೆ ಸತಾಯಿಸುತ್ತಿದ್ದಾರೆ. ನೌಕರರು ಒಪ್ಪತ್ತಿನ ಊಟಕ್ಕೂ ಕಷ್ಟ ಪಡುವಂತಾಗಿದ್ದು, ಜೀವನೋಪಾಯಕ್ಕೆ ಪರದಾಡುವಂತಾಗಿದೆ. ಬಹುತೇಕ ನೌಕರರು ಆರ್ಥಿಕವಾಗಿ ದುರ್ಬಲರು. ಇಂತವರಿಗೆ ಮೋಸ ಮಾಡುತ್ತಿರುವ ಗುತ್ತಿಗೆ ಸಂಸ್ಥೆ ವಿರುದ್ಧ ಕಠಿಣ ಕ್ರಮ ಜರುಗಿಸಿ, ಬಾಕಿ ವೇತನ ಕೊಡಿಸಬೇಕು ಎಂದು ಆಗ್ರಹಿಸಿದರು.
ನೌಕರರಲ್ಲಿ ಶೇ.90 ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಕರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿರುತ್ತಾರೆ. ಇಂತಹವರಿಗೆ 6 ತಿಂಗಳಿನಿಂದ ವೇತನ ನೀಡದೆ, ಇಎಸ್‌ಐ, ಪಿಎಫ್ ಕೂಡ ಒದಗಿಸದೆ ವಂಚಿಸಲಾಗಿದೆ. ಆರು ತಿಂಗಳಿಂದ ನೌಕರರ ಶೋಷಣೆ ನಡೆಯುತ್ತಿದ್ದರೂ ಆಡಳಿತವರ್ಗ ಕಣ್ಣು ಮುಚ್ಚಿ ಕುಳಿತಿರುವುದು ಏಕೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ದಲಿತ ಸಂಟನೆಗಳ ಒಕ್ಕೂಟ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆಯು ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಮಾಡಿಕೊಂಡಿರುವ ಷರತ್ತಿನಂತೆ ನಡೆದುಕೊಂಡಿಲ್ಲ. ಕಾರ್ಮಿಕ ಇಲಾಖೆಯ ನಿಯಮಾನುಸಾರ ನಡೆದುಕೊಂಡಿಲ್ಲ. ಸಂಸ್ಥೆಗೆ ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಸೂಚನೆ ಪಾಲಿಸದಿದ್ದರೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ಇಎಂಡಿ ಹಣ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ದಲಿತ ಸಂಟನೆಗಳ ಒಕ್ಕೂಟದ ಮುಖಂಡರು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನೌಕರರು ಜಿಲ್ಲಾಧಿಕಾರಿ ವೆಂಕಟ್‌ರಾಜಾಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.
ವಿವಿಧ ದಲಿತ ಸಂಟನೆ ಮುಖಂಡರಾದ ಹೂಹಳ್ಳಿ ಪ್ರಕಾಶ್, ವೆಂಕಟಾಚಲಪತಿ, ಯುವಶಕ್ತಿ ಸುಬ್ಬು, ಮಂಜುನಾಥ್, ಸೂಲಿಕುಂಟೆ ರಮೇಶ್, ಯುವರಾಜ್, ಸುರೇಶ್, ಗುತ್ತಿಗೆ ನೌಕರರಾದ ಚಂದ್ರು, ಮಹೇಶ್, ಮಂಜು, ಮಮತಾ, ಸಿಂಧು, ಗೌರಮ್ಮ, ಸುಜಾತಾ ಇತರರು ಭಾಗವಹಿಸಿದ್ದರು.