

ಕೋಲಾರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾಯಕಲ್ಪ ಕಾರ್ಯಕ್ರಮದಡಿ ಸರ್ಕಾರ ನಿಯೋಜಿಸಿರುವ ರಾಜ್ಯ ಗುಣಮಟ್ಟ ಖಾತ್ರಿ ಘಟಕದ ಅಧಿಕಾರಿಗಳ ತಂಡ ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಜ್ಯ ತಾಂತ್ರಿಕ ಸಲಹೆಗಾರ ಡಾ. ವಿ.ರಾಜು ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ಶಾಸ್ತ್ರದ ಮುಖ್ಯಸ್ಥ ಡಾ. ರಂಗನಾಥ ಅವರಿಗೆ ಆಸ್ಪತ್ರೆ ಇತಿಹಾಸ, 400 ಹಾಸಿಗೆಗೆ ಮೇಲ್ದರ್ಜೆಗೇರಿದ್ದರೂ ವೈದ್ಯ, ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳವಾಗದಿರುವುದು, ಇರುವ ವ್ಯವಸ್ಥೆಯಲ್ಲೇ ವಿಶೇಷವಾಗಿ ಎಂಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನ್, ಐಸಿಯು ಘಟಕ, ಮಕ್ಕಳ ವಿಭಾಗ, ಎನ್‌ಐಸಿಯು ಸೇರಿ ವಿವಿಧ ಘಟಕಗಳು, ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆಯೆಂದು ಜಿಲ್ಲಾ ಸರ್ಜನ್ ಡಾ. ಎಸ್.ಜಿ. ನಾರಾಯಣಸ್ವಾಮಿ ಮತ್ತು ವೈದ್ಯ ಸಿಬ್ಬಂದಿ ಪವರ್‌ಪಾಯಿಂಟ್ ಪ್ರಸಂಟೇಷನ್ ಮೂಲಕ ಮಾಹಿತಿ ಒದಗಿಸಿದರು.
ಪರಿಶೀಲನೆ: ಮೊದಲಿಗೆ ಆಸ್ಪತ್ರೆ ಹೊರ ಆವರಣದಲ್ಲಿನ ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆ, ಕಟ್ಟಡಗಳಿಗೆ ಮಳೆಕೊಯ್ಲು ಪದ್ಧತಿ ಅಳವಡಿಕೆ, ಆಸ್ಪತ್ರೆ ಬಳಿ ಆಯುರ್ವೇದಕ್ಕೆ ಸಂಬಂಧಿಸಿದ ಔಷಧೀಯ ಗಿಡ ಬೆಳೆಸಿರುವ ಬಗ್ಗೆ ಜಿಲ್ಲಾ ಸರ್ಜನ್ ಡಾ.ಎಸ್.ಜಿ. ನಾರಾಯಣಸ್ವಾಮಿ ಮಾಹಿತಿ ನೀಡಿದರು.
ಸರ್ಕಾರದ ಕಾರ್ಯಕ್ರಮದಡಿ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಉಪಾಹಾರ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಈ ಮಧ್ಯೆ ಪುಟ್ಟಪರ್ತಿ ಸಾಯಿಬಾಬಾ ಸಂಸ್ಥೆಯಿಂದ ಉಚಿತ ಊಟದ ವ್ಯವಸ್ಥೆ ಕಲ್ಪಿಸುವ ಸಂಬಂಧ ಶಾಸಕ ರಮೇಶ್‌ಕುಮಾರ್ ಚರ್ಚಿಸಿದ್ದಾರೆ. ಇದು ಸಾಧ್ಯವಾದಲ್ಲಿ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಣೆ ನಡೆಸಿದ ಅಧಿಕಾರಿಗಳು ದಾಖಲಾತಿ ಪುಸ್ತಕದಲ್ಲಿನ ಅಂಕಿ-ಅಂಶಗಳಿಗೂ ಸ್ಥಳದಲ್ಲಿ ಕಂಡ ಕಸದ ಪ್ರಮಾಣಕ್ಕೂ ವ್ಯತ್ಯಾಸವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತ್ಯಾಜ್ಯದ ತೂಕಗಳ ಕುರಿತು ಮಾಹಿತಿ ಒದಗಿಸುವಂತೆ ಸೂಚಿಸಿದರು.
ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್, ತಾಯಿ ಮತ್ತು ಮಕ್ಕಳ ವಿಭಾಗ, ಪ್ರಯೋಗಾಲಯ, ಔಷಧ ವಿತರಣಾ ಕೌಂಟರ್, ಶಸ್ತ್ರ ಚಿಕಿತ್ಸಾ ಕೊಠಡಿ, ಹೊರ ಹಾಗೂ ಒಳ ರೋಗಿಗಳ ವಾರ್ಡ್ ಇನ್ನಿತರ ವಿಭಾಗಗಳನ್ನು ಪರಿಶೀಲಿಸಿದ ತಂಡ ಗತ್ಯ ಮಾಹಿತಿ ಕಲೆಹಾಕಿತು.
ಆರೋಗ್ಯ ಮತ್ತ ಕುಟುಂಬ ಕಲ್ಯಾಣಾಧಿಕಾರಿ ಡಾ. ಭಾರತಿ, ವೈದ್ಯರಾದ ಡಾ. ಹೇಮಾ ಭಾಸ್ಕರ್, ಡಾ,. ಪುಷ್ಪಲತಾ, ಕ್ವಾಲಿಟಿ ಮ್ಯಾನೇಜರ್ ಚೇತನ್ ಸಿಂಗ್, ಟೆಕ್ನಿಷಿಯನ್ ನಂದೀಶ್ ಇತರರು ಹಾಜರಿದ್ದರು.
ಸೇವೆ ಪರಿಗಣಿಸಿ ಪ್ರಶಸ್ತಿ: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಸೇವೆ ಗುಣಮಟ್ಟದ ಕುರಿತು ಪರಿಶೀಲನೆ ನಡೆಸುವ ಸಲುವಾಗಿ 27 ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲಿನ ಇಬ್ಬರು ಅಧಿಕಾರಿಗಳು ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಅಂಶ ಪಟ್ಟಿ ಮಾಡುವ ಜತೆಗೆ ಮೌಲ್ಯಮಾಪನ ನಡೆಸಿ ಅಂಕ ನೀಡಲಿದೆ. ಆಸ್ಪತ್ರೆಗಳಲ್ಲಿರುವ ವಿವಿಧ ವಿಭಾಗಗಳಲ್ಲಿ ನೀಡುತ್ತಿರುವ ವೈದ್ಯಕೀಯ ಸೇವೆ ಆಧರಿಸಿ ನೀಡುವ ಅಂಕಗಳ ಆಧಾರದ ಮೇಲೆ ಕಾಯಕಲ್ಪ ಪ್ರಶಸ್ತಿ ನೀಡಲಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಅನುದಾನ ಪಡೆಯಲು ಈ ಮೌಲ್ಯಮಾಪನ ನೆರವಾಗಲಿದೆ.