

ಮೈಸೂರು: ಮುಡಾ ಹಗರಣ ಬಯಲಿಗೆ ಬಂದ ನಂತರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಷಡ್ಯಂತ್ರದ ಬಗ್ಗೆ ತನಿಖೆ ಆಗಬೇಕು ಹಾಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಎಚ್ಚರಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿ ಆ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಸಿದ್ದರು. ಆದರೆ, ನನ್ನನ್ನು ಬಂಧಿಸಿದರೆ ಅವರಿಗೇ ತೊಂದರೆ ಆಗುತ್ತದೆ ಎಂದು ಸುಮ್ಮನಾಗಿದ್ದಾರೆ. ನಾನು ನಂಜನಗೂಡು ಪೊಲೀಸರಿಗೆ ಬಹಿರಂಗ ಪತ್ರ ಬರೆದು ನನ್ನ ವಿರುದ್ಧ ನಡೆದ ಷಡ್ಯಂತ್ರ ಕುರಿತು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದೇನೆ. ನನ್ನ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವವರಿಗೆ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನಡೆಸುತ್ತಿರುವ ತನಿಖೆಯಲ್ಲಿ ನನ್ನ ವಿಚಾರಣೆ ಮುಗಿದಿದೆ. ಇಂದಿನಿಂದ ಅಧಿಕಾರಿಗಳು ತಮ್ಮ ತನಿಖೆ ಮುಂದುವರೆಸುತ್ತಾರೆ. ನನ್ನ ಅಗತ್ಯ ಬಿದ್ದರೆ ಕರೆಯಿಸುವುದಾಗಿ ತಿಳಿಸಿದ್ದಾರೆ. ಅವರ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.