ಇಡಿ ಮುಂದೆ ಸ್ನೇಹಮಯಿ ಕೃಷ್ಣ ಹಾಜರು

Published on

ಮೈಸೂರು: ಮುಡಾ ಹಗರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದಾಗಿ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಗುರುವಾರ ಬೆಂಗಳೂರಿನ ಜಾರಿ ನಿರ್ದೇಶಾನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿರುವುದಾಗಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಅಂದಿನ ಮುಡಾ ಆಯುಕ್ತರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿ ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ದಾಖಲೆ ಕೇಳಿದ್ದರು. ಆಸ್ತಿ ಪತ್ರ, ಬ್ಯಾಂಕ್ ಖಾತೆ ವಿವರ, ಆದಾಯದ ಮಾಹಿತಿ ಕೇಳಿದ್ದರು. ಇಡಿ ಅಧಿಕಾರಿಗಳ ತನಿಖೆ ಪ್ರಕಾರ ಮೊದಲು ದೂರುದಾರರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ. ಹೀಗಾಗಿ ಮೊದಲು ನನ್ನ ವಿಚಾರಣೆಗೆ ಕರೆದಿದ್ದಾರೆ. 500 ಪುಟಗಳ ದಾಖಲೆಗಳನ್ನು ಸಲ್ಲಿಸಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಮುಖ್ಯಮಂತ್ರಿ ವಿರುದ್ಧವೂ ಹೋರಾಟ ಮಾಡಬಹುದು. ಕಾಣದ ಕೈಗಳು ಇದಾವೋ, ಇಲ್ಲವೋ ಅನ್ನೋದು ಮುಖ್ಯವಲ್ಲ. ಸಿಎಂ ವಿರುದ್ಧ ಕೇಳಿ ಬಂದಿರುವ ಆರೋಪ ಎಷ್ಟು ಸತ್ಯ ಅಥವಾ ಸುಳ್ಳು ಅನ್ನೋದು ನೋಡಬೇಕು. ಹಾಗೇನಾದರೂ ನನ್ನ ಮೇಲೆ ಅನುಮಾನವಿದ್ದರೆ ಯಾವ ತನಿಖಾ ಸಂಸ್ಥೆಯಾದರೂ ನನ್ನ ವಿಚಾರಣೆ ನಡೆಸಬಹುದು ಎಂದರು.
ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೂ ನಾನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ಸಿಬಿಐ ತನಿಖೆಗೆ ವಹಿಸುವ ಕುರಿತು ನಮ್ಮ ವಕೀಲರು ವಾದ ಮಾಡಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net