

ಮೈಸೂರು: ಜಾರಿ ನಿರ್ದೇಶನಾಲಯಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನಕಲಿ ದಾಖಲೆಗಳನ್ನು ನೀಡಿದ್ದು, ಅದರ ಸತ್ಯಾಸತ್ಯತೆ ವಿಚಾರಿಸಬೇಕು ಎಂದು ಹತ್ತು ದಿನಗಳ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ನೀಡಿರುವ ದಾಖಲೆಗಳ ಪರಿಶೀಲನೆಗೆ ಅಥವಾ ಅಥವಾ ಆರ್ಥಿಕ ಅಪರಾಧ ಏನಾದರು ನಡೆದಿದೆಯೇ ಎಂದು ಪರಿಶೀಲಿಸಲು ಇಡಿ ಅಧಿಕಾರಿಗಳು ಮುಡಾ ಹಾಗೂ ತಾಲೂಕು ಕಚೇರಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ. ಈ ಭೇಟಿಗೆ ‘ಇಡಿ ದಾಳಿ’ ಎಂದು ಕರೆಯುವುದು ಸರಿಯಲ್ಲ ಎಂದರು.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಯಲ್ಲಿ ಮುಡಾ ವಿಚಾರವನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಡಿಯನ್ನು ಬಳಸಿಕೊಳ್ಳುತ್ತಿದೆ. ಹರಿಯಾಣ ಚುನಾವಣೆಯಲ್ಲೂ ಮುಡಾ ಹಗರಣವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷವನ್ನು ಹೆದರಿಸುವ ಕಾರ್ಯ ಮಾಡುತ್ತಿದೆ. ನಾವು ಇಡಿ, ಐಟಿಗೆ ಹೆದರುವ ಪ್ರಶ್ನೆಯೇ ಇಲ್ಲ. ವಿಧಾನಸಭೆ ಉಪ ಚುನಾವಣೆಗೆ ನಮ್ಮ ನಾಯಕರು ಹೋಗದಂತೆ ತಡೆಯುವ ಉದ್ದೇಶದಿಂದ ಇಡಿಯನ್ನು ಬಳಸಿಕೊಳ್ಳುತ್ತಿರಬಹುದು ಎಂದು ಆರೋಪಿಸಿದರು.
ಮುಡಾವನ್ನು ಸ್ವಚ್ಛಗೊಳಿಸಲು ಖಡಕ್ ಆಗಿರುವ ಐಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಬೇಕು. ಕನಿಷ್ಠ ಮೂರು ವರ್ಷ ಮುಡಾಗೆ ಅಧ್ಯಕ್ಷರನ್ನು ನೇಮಕ ಮಾಡಬಾರದು. ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾದಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.