

ಸುಳ್ಯ: ಸೂರ್ಯನು ಸರ್ವಶಕ್ತಿಗಳ ಮೂಲವಾಗಿದ್ದು ಮಂತ್ರೋಚ್ಛಾರಣೆಯಿಂದ ದೇವರು ಸಂತೃಪ್ತಗೊಳ್ಳುತ್ತಾನೆ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಹೇಳಿದರು.
ನಗರದ ಸ್ನೇಹ ಶಾಲೆ ಸೂರ್ಯಾಲಯದ ವಾರ್ಷಿಕೋತ್ಸವದಲ್ಲಿ ಸೂರ್ಯಾಲಯದ ಸೂರ್ಯ ದೇವರನ್ನು ಅರ್ಚಿಸಿ ಮಾತನಾಡಿ, 2016ನೇ ವರ್ಷದಿಂದ ಪ್ರಾರಂಭಗೊಂಡು ಇಲ್ಲಿಯವರೆಗೆ ನಾವು ಸೂರ್ಯದೇವರ ಆರಾಧನೆಯನ್ನು ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಆಚರಿಸಿಕೊಂಡು ಬಂದಿರುತ್ತೇವೆ. ಆದ್ದರಿಂದ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಚಲಿಸುವ ಈ ಶುಭ ಸಮಯದಲ್ಲಿ ನಾವು ಸೂರ್ಯಾಲಯದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.
ಮಕ್ಕಳು ಸೂರ್ಯಾಷ್ಟಕ, ಗಣಪತಿ ಅಥರ್ವಶೀರ್ಷ, ಗಾಯತ್ರೀ ಮಂತ್ರ ಇತ್ಯಾದಿ ಶ್ಲೋಕಗಳನ್ನು ಒಂದು ಗಂಟೆಯ ಕಾಲ ಪಠಿಸುವ ಮೂಲಕ ಪೂಜಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪೌರೋಹಿತ್ಯ ವಹಿಸಿದ ಸಂಸ್ಥೆಯ ಅಧ್ಯಕ್ಷರು ಶ್ಲೋಕದ ಅರ್ಥವನ್ನು ವಿವರಿಸುವುದರ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿದರು.
ನಂತರ ಸೂರ್ಯದೇವರಿಗೆ ಶಾಲಾ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕ ವೃಂದದವರು ಅಭಿಷೇಕ ಮಾಡಿದರು. ಕೊನೆಯಲ್ಲಿ ಮಾತಾಪಿತೃ ಪೂಜನ ನಡೆಸುವುದರ ಮೂಲಕ ಮಕ್ಕಳು ಹೆತ್ತವರ ಹಾಗೂ ಗುರುಗಳ ಆಶೀರ್ವಾದವನ್ನು ಪಡೆದುಕೊಂಡರು.
ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ, ಆಡಳಿತ ಮಂಡಳಿಯ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.