ಸೋಂಪುರ ಜಾತ್ರೆಯಲ್ಲಿ ಸಂಕ್ರಾಂತಿ ಸಡಗರ; 11ನೇ ವರ್ಷದ ಕಡಲೆಕಾಯಿ ಪರಿಷೆ, ಶ್ರೀ ಬಸವೇಶ್ವರಸ್ವಾಮಿ ದೇಗುಲದಲ್ಲಿ ಗಿರಿಜಾಕಲ್ಯಾಣ

SOMPURA
Published on

ವರ್ಷದಿಂದ ವರ್ಷಕ್ಕೆ ರಂಗೇರುತ್ತಿರುವ ಸೋಂಪುರ ಕಡಲೆಕಾಯಿ ಪರಿಷೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಬುಧವಾರ ಜನಪ್ರವಾಹವೇ ಹರಿದುಬಂದಿತ್ತು. ವರಾಹಸಂದ್ರ, ಹೆಮ್ಮಿಗೆಪುರ, ದೊಡ್ಡಬೆಲೆ, ಚನ್ನವೀರಯ್ಯನ ಪಾಳ್ಯ, ಎಚ್. ಗೊಲ್ಲಹಳ್ಳಿ ಸೇರಿ ಹೆಮ್ಮಿಗೆಪುರ ಸುತ್ತಮುತ್ತಲ ನೂರಾರು ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.

ಪರಿಷೆ ಜತೆಗೆ ಶ್ರೀ ಗಿರಿಜಾ ಕಲ್ಯಾಣೋತ್ಸವ ನಡೆದ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಭಕ್ತರು ನೆರೆದಿದ್ದರು.

ಕಡಲೆಕಾಯಿ, ಕಬ್ಬು ವಿತರಣೆ: ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ನೈಸ್ ರಸ್ತೆ ಸರ್ಕಲ್​ನಲ್ಲಿ ಸಂಕ್ರಾಂತಿ ಪ್ರಯುಕ್ತ ಕಳೆದ 10 ವರ್ಷದಿಂದ ನಡೆದುಕೊಂಡು ಬರುತ್ತಿರುವ ಶ್ರೀ ಬಸವೇಶ್ವರ ಸ್ವಾಮಿ ಕಡಲೆಕಾಯಿ ಪರಿಷೆ ಹಾಗೂ ಜಾತ್ರಾ ಮಹೋತ್ಸವ ಹಲವು ವಿಶೇಷಗಳ ಮೂಲಕ ಗಮನ ಸೆಳೆಯಿತು. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಶ್ರೀ ಬಸವೇಶ್ವರಸ್ವಾಮಿ ಭಕ್ತ ಮಂಡಳಿಯಿಂದ ಉಚಿತವಾಗಿ ಕಡಲೆಕಾಯಿ ಹಾಗೂ ಕಬ್ಬು ವಿತರಿಸಲಾಯಿತು. ಬೆಳಗ್ಗೆ 7ರಿಂದ ರಾತ್ರಿ 10 ಗಂಟೆವರಗೆ ಅನ್ನದಾಸೋಹ ನಡೆಯಿತು.

ಶಿಡ್ಲಘಟ್ಟ, ಮಾಗಡಿ, ಆನೇಕಲ್, ಅತ್ತಿಬೆಲೆ, ಕುಣಿಗಲ್, ಹೊಸೂರು, ರಾಮನಗರ, ಕನಕಪುರ, ಪಾವಗಡ, ಅನಂತಪುರ, ಚಿತ್ತೂರಿನ ರೈತರು ಹಾಗೂ ವ್ಯಾಪಾರಿಗಳು ಜಮಾವಣೆಗೊಂಡಿದ್ದರು.

ಗಣ್ಯರು ಭಾಗಿ: ಪೂಜಾ ಕುಣಿತ, ವೀರಭದ್ರನ ಕುಣಿತ, ಯಕ್ಷಗಾನ, ಕೋಲಾಟ, ಕಂಸಾಳೆ ಮತ್ತಿತರ ಜಾನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದವು. ಕನಕ ಪುರ ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀ ಮರಳೇಗವಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಸಚಿವ ಆರ್. ಅಶೋಕ್, ಬಿಜೆಪಿ ಮುಖಂಡರಾದ ವಿ.ವೈ. ವಿಜಯೇಂದ್ರ, ಶಾಸಕರಾದ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್, ಜಿಪಂ ಅಧ್ಯಕ್ಷ ಮುನಿರಾಜು , ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು. ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್ ಜಾತ್ರಾ ಮಹೋತ್ಸವದ ರೂವಾರಿಯಾಗಿದ್ದಾರೆ.

ಗೋಪೂಜೆ

ಬಸವೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಸುಗಳಿಗೆ ಕಾಣಿಸಿಕೊಳ್ಳುವ ರೋಗ ಪರಿಹಾರಕ್ಕೆ ಬಸವೇಶ್ವರ ಸ್ವಾಮಿಗೆ ಹರಕೆ ಹೊರುವ ಪದ್ಧತಿ ಇರುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ರಾಸುಗಳ ಆರೋಗ್ಯ ಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ದೇಗುಲವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.

ಬಾಗಿನ ಅರ್ಪಣೆ

ಪ್ರತಿ ಬಾರಿ ಒಂದಿಲ್ಲೊಂದು ವಿಶೇಷತೆಗಳಿಂದ ಗಮನ ಸೆಳೆಯುವ ಸೋಂಪುರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹಿರಿಯ ಮುತೆôದೆಯರಿಗೆ ಬಾಗಿನ ಅರ್ಪಿಸಲಾಯಿತು. ಕಳೆದ ಬಾರಿ ರೈತಾಪಿ ವರ್ಗದ ಅಂಧ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಧ ಮಕ್ಕಳಿಗೆ ಬಟ್ಟೆ, ಶೂ ಸೇರಿ ಅಗತ್ಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಗಿತ್ತು. ಅದಕ್ಕೂ ಹಿಂದಿನ ಬಾರಿ ರೈತಾಪಿ ವರ್ಗದ 60 ವರ್ಷ ತುಂಬಿದ ಸಾವಿರ ಹಿರಿಯ ಜೋಡಿಗಳಿಗೆ ಷಷ್ಠಿ ಕಾರ್ಯಕ್ರಮ ನೆರವೇರಿಸಲಾಗಿತ್ತು.

ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಪ್ರತಿ ಸಂಕ್ರಾಂತಿಯಂದು ಕಡಲೆಕಾಯಿ ಪರಿಷೆ ಹಾಗೂ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಭಕ್ತರು ಸಂಕ್ರಾಂತಿ ಸಡಗರದಲ್ಲಿ ಪಾಲ್ಗೊಂಡಿರುವುದು ನನ್ನಲ್ಲಿ ಕೃತಾರ್ಥಭಾವ ಮೂಡಿಸಿದೆ. | ಎಂ. ರುದ್ರೇಶ್ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿವಾಹ ಆಕಾಂಕ್ಷಿಗಳು, ನೂತನ ದಾಂಪತ್ಯಕ್ಕೆ ಕಾಲಿಟ್ಟ ದಂಪತಿಗಳು ಶ್ರೀ ಗಿರಿಜಾಕಲ್ಯಾಣೋತ್ಸವ ದಲ್ಲಿ ಪಾಲ್ಗೊಳ್ಳುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ. ಈ ಅಪರೂಪದ ಗಳಿಗೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದೆ. | ಡಾ. ಸೋಮಸುಂದರ್ ದೀಕ್ಷಿತ್ ಪ್ರಧಾನ ಅರ್ಚಕ ನಮಗಾಗಿ ನಾವು ಬದುಕದೆ ಸಮಾಜದ ಹಿತಕ್ಕಾಗಿ ಬದುಕಬೇಕು ಎಂಬುದನ್ನು ನಮ್ಮ ನಾಡಿನ ಸಂತರು, ದಾರ್ಶನಿಕರು ವಿಚಾರಧಾರೆಗಳ ಮೂಲಕ ತಿಳಿಸಿಹೋಗಿದ್ದಾರೆ. ಅಂತಹ ಅಮೂಲ್ಯ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ವಣದ ಕಡೆಗೆ ಸಾಗೋಣ. | ವಿಜಯೇಂದ್ರ ಯಡಿಯೂರಪ್ಪ ಬಿಜೆಪಿ ಮುಖಂಡ

| ಶಿವರಾಜ ಎಂ. ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net