ಅಂಗನವಾಡಿ ಅಂಗಳದಲ್ಲಿ ಹಾವು-ಚೇಳು!

08 mdg story1
Published on

ಸಂತೋಷ ಮುರಡಿ ಮುಂಡರಗಿ
ಪಟ್ಟಣ ಸೇರಿ ತಾಲೂಕಿನ ಕೆಲವೆಡೆ ಅಂಗನವಾಡಿ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಅನೇಕ ಕಡೆ ಮಲಿನ ವಾತಾವರಣ ಇರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಹುಳುಗಳ ಕಾಟದಿಂದ ಮಕ್ಕಳು ಬೇಸತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 185 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 162 ಸ್ವಂತ ಕಟ್ಟಡದಲ್ಲಿದ್ದರೆ, 13 ಬಾಡಿಗೆ ಕಟ್ಟಡದಲ್ಲಿವೆ. ಶಾಲಾ ಕಟ್ಟಡದಲ್ಲಿ 5, ಸಮುದಾಯ ಭವನದಲ್ಲಿ 3, ಗ್ರಾಪಂ ಕಟ್ಟಡದಲ್ಲಿ 1, ಪರ್ಯಾಯ ವ್ಯವಸ್ಥೆಯಲ್ಲಿ 1 ಕೇಂದ್ರ ನಡೆಸಲಾಗುತ್ತಿದೆ. ಒಟ್ಟು 9,713 ಮಕ್ಕಳಿದ್ದು, 1,228 ಗರ್ಭಿಣಿಯರು, 1,238 ಬಾಣಂತಿಯರು ಸೇರಿ 12,179 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ.ಪಟ್ಟಣದ ಕೋಟೆ ಭಾಗದ ದುರ್ಗಾದೇವಿ ದೇವಸ್ಥಾನ ಬಳಿಯ ಅಂಗನವಾಡಿ ಕೇಂದ್ರ ಸಂಖ್ಯೆ 103ರ ಮುಂಭಾಗದ ರಸ್ತೆಯುದ್ದಕ್ಕೂ ಜನರು ಬಯಲು ಶೌಚ ಮಾಡುತ್ತಾರೆ. ಅಂಗನವಾಡಿಗೆ ತೆರಳಬೇಕೆಂದರೆ ಮೂಗು ಮುಚ್ಚಿಕೊಂಡು ಹೋಗಬೇಕು. ಹಲವು ವರ್ಷಗಳಿಂದ ಅಂಗನವಾಡಿ ಮುಂದೆ ಶೌಚ ಮಾಡುತ್ತಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿನ ಕಾರ್ಯಕರ್ತೆಯರಿಗೆ, ಸಿಬ್ಬಂದಿಗೆ ಮುಜುಗರ ಉಂಟಾಗುತ್ತಿದೆ.
3ರಿಂದ 6 ವರ್ಷದೊಳಗಿರುವ ಒಟ್ಟು 42 ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದರು. ಆದರೆ ಗಬ್ಬುವಾಸನೆಯ ಪರಿಣಾಮ ಬರುವ ಮಕ್ಕಳೂ ಬರುತ್ತಿಲ್ಲ. ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಕೇವಲ 27 ಮಕ್ಕಳು ಬರುತ್ತಿದ್ದು, ಬಹುತೇಕರ ಹಾಜರಾತಿ ಕಡಿಮೆಯಾಗಿದೆ. ಈ ವಾತಾವರಣದಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿ ಜ್ವರ, ವಾಂತಿ, ಬೇಧಿಗೆ ತುತ್ತಾಗುತ್ತಿದ್ದಾರೆ.
ಈ ಅಂಗನವಾಡಿ ಕೇಂದ್ರ 5ನೇ ವಾರ್ಡಿನಲ್ಲಿರಬೇಕಿತ್ತು. ಆದರೆ, ಅಲ್ಲಿ ಜಾಗೆಯ ವ್ಯವಸ್ಥೆ ಇಲ್ಲದ ಕಾರಣ ಹಿಂದೆ ಹಿರಿಯರು, ಅಧಿಕಾರಿಗಳು 4ನೇ ವಾರ್ಡಿನ ಈ ಭಾಗದಲ್ಲಿಯೇ ಅಂಗನವಾಡಿ ನಿರ್ಮಿಸಿದ್ದಾರೆ. ಆದರೆ, ಈಗ ಅವ್ಯವಸ್ಥೆ ವಾತಾವರಣದ ಮಧ್ಯೆದಲ್ಲಿರಲು ಮಕ್ಕಳಿಗೆ, ಕಾರ್ಯಕರ್ತೆಯರು ಸಿಬ್ಬಂದಿಗೆ ಕಿರಿಕಿರಿಯಾಗುತ್ತಿದೆ.
ಬರದೂರು 1ನೇ ವಾರ್ಡಿನಲ್ಲಿರುವ ಅಂಗನವಾಡಿ ಮುಂದೆ ಗಲೀಜು ನೀರು ಹರಿದು ಬಂದು ಒಂದೆಡೆ ಶೇಖರಣೆಯಾಗುತ್ತದೆ. ಅಲ್ಲಿ ಕಸ ಬೆಳೆ ಗಬ್ಬು ವಾಸನೆ ಬೀರುವುದು, ಸೊಳ್ಳೆ, ಚೇಳು, ಹುಳುಗಳ ಕಾಟವೂ ಹೆಚ್ಚಾಗುತ್ತಿದೆ.
ಡಂಬಳ 1ನೇ ವಾರ್ಡಿನ ಭಾಗದ ಸೊಸೈಟಿ ಜಾಗೆಯಲ್ಲಿರುವ ಅಂಗನವಾಡಿ ಸುತ್ತಲೂ ಕಸದ ಗಿಡ, ಜಾಲಿಗಿಡ ಬೆಳೆದಿವೆ. ಗಲೀಜು ವಾತಾವರಣವಿದೆ. ಸೊಳ್ಳೆ ಕಾಟ ಹೆಚ್ಚಾಗುತ್ತಿದೆ. ಡೋಣಿ ಗ್ರಾಮದ ಕೆಜಿಎಸ್ ಶಾಲೆ ಹತ್ತಿರವಿರುವ ಅಂಗನವಾಡಿ ಹಿಂದೆ ಗಲೀಜು ನೀರು ಬಂದು ನಿಲ್ಲುತ್ತದೆ. ಗಬ್ಬು ವಾಸನೆ ಮಕ್ಕಳಿಗೆ ಕಿರಿಕಿರಿಯಾಗುತ್ತಿದೆ. ಕೊರ್ಲಹಳ್ಳಿ ಗ್ರಾಮದ 3ನೇ ವಾರ್ಡಿನಲ್ಲಿರುವ ಅಂಗನವಾಡಿ ಪಕ್ಕದಲ್ಲಿ ತಿಪ್ಪೆ ಹಾಕಲಾಗುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿದೆ. ತಾಲೂಕಿನ ಹಲವು ಕಡೆಗಳಲ್ಲಿ ಅಂಗನವಾಡಿ ಕೇಂದ್ರದ ಭಾಗದಲ್ಲಿ ಇಂತಹ ಸಮಸ್ಯೆ ಕಂಡುಬರುತ್ತವೆ.

ಡಂಬಳದ 1ನೇ ವಾರ್ಡ್‌ನಲ್ಲಿರುವ ಅಂಗನವಾಡಿ ಸುತ್ತಲೂ ಕಸ ಬೆಳೆದಿವೆ. ಸ್ವಚ್ಛತೆ ಇಲ್ಲದೆ ಗಬ್ಬು ವಾಸನೆ ಬೀರುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂಗನವಾಡಿ ಸುತ್ತ ಕಾಂಪೌಂಡ್ ನಿರ್ಮಿಸಬೇಕು. ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಸುತ್ತಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಆರೋಗ್ಯಪೂರ್ಣ ವಾತಾವರಣ ಕಲ್ಪಿಸಬೇಕು.-ಈರಣ್ಣ ನಂಜಪ್ಪನವರ, ಡಂಬಳ ಸಾಮಾಜಿಕ ಕಾರ್ಯಕರ್ತ ಅಂಗನವಾಡಿಯಲ್ಲಿನ ಬಾಲವಿಕಾಸ ಸಮಿತಿ ಮುಖಾಂತರ ಸ್ವಚ್ಛತೆ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುವುದು. ಅಂಗನವಾಡಿ ಸುತ್ತ-ಮುತ್ತ ಸ್ವಚ್ಛತೆಗೆ ಸಂಬಂಧಿಸಿದಂತೆ ಪುರಸಭೆ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಪಟ್ಟಣ ಸೇರಿ ತಾಲೂಕಿನಲ್ಲಿರುವ ಅಂಗನವಾಡಿಗಳ ಸುತ್ತ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.-ಮೃತ್ಯುಂಜಯ ಗುಡ್ಡದಾನ್ವೆರಿ ಸಿಡಿಪಿಒ (ಪ್ರಭಾರಿ) ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net