ಹಾವು ಕಡಿದು ಯುವಕ ಸಾವು

17_GJD_SNAKE BIT
Published on

ಗಜೇಂದ್ರಗಡ: ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ಹಾವು ಕಚ್ಚಿ ಯುವಕನೊಬ್ಬ ಸೋಮವಾರ ಮೃತಪಟ್ಟಿದ್ದಾನೆ. ಆದರೆ, ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡದಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶಿವಾಜಿಪೇಟೆಯ ನಿವಾಸಿ ಹೊನ್ನಪ್ಪ ಶರಣಪ್ಪ ಹೂಗಾರ (25) ಮೃತ ದುರ್ದೈವಿ. ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿತ್ತು. ತಕ್ಷಣವೇ ಆತನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯ ಹೊನ್ನಪ್ಪ ಕೊನೆಯುಸಿರೆಳೆದಿದ್ದಾನೆ. ಹಾವು ಕಡಿತಕ್ಕೊಳಗಾದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ . ವೈದ್ಯರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ, ರೋಗಿಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಆಸ್ಪತ್ರೆಗೆ ರೋಗಿಗಳನ್ನು ಕರೆ ತಂದರೆ ಅವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯ ಪಟ್ಟಣದ ಆಸ್ಪತ್ರೆಯಲ್ಲಿ ಇಲ್ಲದಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. | ಎಂ.ಎಸ್. ಹಡಪದ, ಪುರಸಭೆ ಮಾಜಿ ಸದಸ್ಯ

ಸೋಮವಾರ ಸಂಜೆ ಹಾವು ಕಚ್ಚಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯ ಅಸುನಿಗಿದ್ದಾನೆ. ಡಾ. ಮಹೇಶ ಚೋಳಿನ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net