ನಾಲೆಯಲ್ಲಿ ಜೊಂಡು ಬೆಳೆದು ಹಾವು, ಚೇಳು ಕಾಟ

16-kkr1(5-25
Published on

ಕಿಕ್ಕೇರಿ: ಹೋಬಳಿಯ ಗಡಿಭಾಗದ ಮಾದಾಪುರ ಗ್ರಾಮದ ಸುತ್ತ ಹರಿಯುವ ನಾಲೆಯಲ್ಲಿ ಜೊಂಡು ಬೆಳೆದು ಹಾವು, ಚೇಳು ಕಾಟ ಹೆಚ್ಚಾಗಿದೆ.

ಗ್ರಾಮವನ್ನು ಶ್ರೀರಾಮದೇವರ ಉತ್ತರ ನಾಲೆ ಸುತ್ತುವರಿದಿದೆ. ಹೂಳು, ಜೊಂಡು ಬೆಳೆದು ನಾಲೆಯಲ್ಲಿ ಸರಾಗವಾಗಿ ನೀರು ಹರಿಯಲು ಅಡಚಣೆಯಾಗುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ಸೊಳ್ಳೆ ಹಾಗೂ ವಿಷಜಂತುಗಳ ಕಾಟ ವಿಪರೀತವಾಗಿದೆ. ಬೇಸಿಗೆ ಕಾಲದಲ್ಲಿ ಜೊಂಡಿನ ಜತೆ ನೀರು ಕೊಳೆತು ಮಲಿನವಾಗಿ ದುರ್ವಾಸನೆ ಬೀರುತ್ತಿದೆ.

ನಾಲೆಯಲ್ಲಿ ಜೊಂಡು, ಗಿಡಗಂಟಿ ಬೆಳೆದಿರುವುದರಿಂದ ಹಾವು, ಚೇಳು, ವಿಷಜಂತುಗಳ ಕಾಟ ಹೆಚ್ಚಾಗಿದೆ. ಹೀಗಾಗಿ ನಾಲೆ ಪಕ್ಕದಲ್ಲಿರುವ ನಿವಾಸಿಗಳು ಭೀತಿಯಿಂದ ಕಾಲ ದೂಡುವಂತಾಗಿದೆ. ರೈತಾಪಿ ಕುಟುಂಬದವರು ನಾಲೆ ಪಕ್ಕದಲ್ಲಿಯೇ ಜಾನುವಾರುಗಳನ್ನು ಕಟ್ಟ್ಟಿ ಹಾಕುವುದರಿಂದ ಮೂಕಪ್ರಾಣಿಗಳಿಗೆ ಕಂಟಕವಾಗಿದೆ. ಚಿನ್ನೇನಹಳ್ಳಿ ಮಾರ್ಗವಾಗಿ ಮಾದಾಪುರಕ್ಕೆ ಹೋಗುವ ಆರಂಭದಲ್ಲಿನ ಸೇತುವೆ ಬಳಿ ದಟ್ಟವಾಗಿ ಜೊಂಡು ಬೆಳೆದಿದೆ. ಇಲ್ಲಿನ ಈಶ್ವರ ದೇಗುಲದ ಬಳಿ ಸೋಪಾನಕಟ್ಟೆ, ಮೆಟ್ಟಿಲು ಇದೆ. ಈ ಸ್ಥಳವೇ ಜೊಂಡಿನಿಂದ ಆವರಿಸಿದೆ.

ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಇರುವುದರಿಂದ ನಾಲೆಯಲ್ಲಿರುವ ಜೊಂಡು ತೆರವು ಮಾಡಿಸಲು ಸಂಬಂಧಪಟ್ಟವರು ತುರ್ತು ಕ್ರಮವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net