

ಮಡಿಕೇರಿ:
ನಮ್ಮಂತೆ ಜೀವಿಗಳಾಗಿರುವ ವನ್ಯಜೀವಿಗಳ ಜತೆ ಸಹಬಾಳ್ವೆ ಇರಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವಿಷಪೂರಿತ ಹಾವುಗಳು ಮತ್ತು ಗುರುತಿಸುವಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಶನಿವಾರ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಷಪೂರಿತ ಹಾವುಗಳ ಬಗ್ಗೆ ಮಾಹಿತಿ, ಹಾವುಗಳನ್ನು ಹಿಡಿಯುವ ಸಲಕರಣೆಗಳು, ಹಾವುಗಳು ಬರದಂತೆ ತಡೆಯುವುದು, ಆಹಾರ, ಪ್ರಥಮ ಚಿಕಿತ್ಸೆ, ಅಪನಂಬಿಕೆಗಳು, ರೈತಸ್ನೇಹಿ ಹಾವುಗಳು, ಇತ್ಯಾದಿ ವಿಷಯದ ಬಗ್ಗೆ ತಜ್ಞರು ನೀಡುವಂತಹ ಮಾಹಿತಿಯನ್ನು ಈ ತರಬೇತಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಪಡೆದುಕೊಂಡು ಇತರರಿಗೂ ತಿಳಿಸಬೇಕು. ಹಾವುಗಳೆಂದ ತಕ್ಷಣ ಭಯ ಹೆದರಿಕೆ ಬೇಡ. ಆತಂಕಪಡುವ ಅವಶ್ಯಕತೆಯಿಲ್ಲ. ಭಯದಲ್ಲಿ ಶಾಂತ ಸ್ವಭಾವದ ಏಕಾಂತ ಬಯಸುವ ಹಗೆತನವಿಲ್ಲದ ನಾಚಿಕೆ ಸ್ವಭಾವದ ಹಾವುಗಳು ರೈತಸ್ನೇಹಿ. ಅವುಗಳನ್ನು ಕೊಲ್ಲದೇ ನೈಸರ್ಗಿಕ ಜೈವಿಕ ಸಮತೋಲನಕ್ಕೆ ನಾವು ಸಹಕಾರಿಯಾಗಬೇಕು. ಹಾವು ಕಚ್ಚಿದ ಗುರುತು ಮೈಮೇಲೆ ಕಂಡಾಗ ಶಾಂತವಾಗಿ ಪ್ರಥಮ ಚಿಕಿತ್ಸೆಯೊಂದಿಗೆ ಆಧುನಿಕ ಸೌಲಭ್ಯದ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಲಿಂಗರಾಜು ದೊಡ್ಡಮನಿ ಮಾತನಾಡಿ ಎಲ್ಲಾ ಕಡೆ ಹಾವಿನ ವಿಷಕ್ಕೆ ಔಷಧಿ ದೊರೆಯುತ್ತಿದೆ. ಸಾರ್ವಜನಿಕರು ತಡ ಅಥವಾ ನಿರ್ಲಕ್ಷ್ಯ ಮಾಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ಕೆ.ಬಿ. ಚಿದಾನಂದ ಮಾತನಾಡಿ, ವಿಷಪೂರಿತ ಹಾವು ಉತ್ಪಾದಿಸುವ ವಿಷವು ಕೇವಲ ಪರಿವರ್ತಿತ ಜೊಲ್ಲು. ಇದು ಮನುಷ್ಯನ ದೇಹ ಸಂಪರ್ಕ ಬಂದಾಗ ಮಾತ್ರ ನರಗಳ ವ್ಯೂಹದ ಮೇಲೆ, ರಕ್ತದ ಮೇಲೆ, ಸ್ನಾಯುಗಳ ಮೇಲೆ ಹಾನಿಕಾರಕ ಪರಿಣಾಮ ಉಂಟುಮಾಡಿ ವಿಷಕಾರಿಯಾಗುತ್ತದೆ. ಮಂಡಲದ ಹಾವು, ಕಟ್ಟು ಹಾವು, ನಾಗರ ಹಾವು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಪಶುಸಂಗೋಪನೆಯಲ್ಲಿ ಹಾವುಗಳ ಬಗ್ಗೆ ಮೂಢನಂಬಿಕೆಯನ್ನು ತೆಗೆಯಬೇಕು ಎಂದರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಮಾತನಾಡಿ, ಈಗಾಗಲೇ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಯೋಜನೆಯಂತೆ ಹಾವುಗಳ ಕಚ್ಚುವಿಕೆಯಿಂದ ಸಾವಿನ ಪ್ರಮಾಣವನ್ನು ಮುಂದಿನ ಕೆಲವು ವರ್ಷದೊಳಗೆ ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿದೆ. ರೈತರು ಕಾಲಿಗೆ ಕವಚಗಳು, ಹೊಲಗದ್ದೆಗಳು, ಮನೆ, ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಂಸ್ಥೆಯಿAದ ಹಲವಾರು ವನ್ಯಜೀವಿಗಳು ಮತ್ತು ಹಾವಿನ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಪಶುವೈದ್ಯಾಧಿಕಾರಿ ಡಾ. ಶ್ರೀದೇವು ಮಾತನಾಡಿ, ಹಾವಿನ ಬಗ್ಗೆ ಸಂಪೂರ್ಣ ಮಾಹಿತಿ ಮಾಡಿಕೊಟ್ಟರು. ಅಲ್ಲದೆ ರೈತರಲ್ಲಿದ್ದ ಅಪನಂಬಿಕೆ, ಪ್ರಥಮ ಚಿಕೆತ್ಸೆ, ಪ್ರತಿಬಂಧಕಗಳು, ವೈದ್ಯಕೀಯ ಸೌಲಭ್ಯದ ಬಗ್ಗೆ ವಿವರಿಸಿದರು. ರೈತರಲ್ಲಿದ್ದ ಹಲವಾರು ಆತಂಕಗಳನ್ನು ಬಗೆಹರಿಸಿದರು. ವಿಷಪೂರಿತ ಹಾವುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ಮಾಡಿಕೊಟ್ಟರು.
ಉರಗಪ್ರೇಮಿ ಪುಷ್ಪಾಧರ (ಸ್ನೇಕ್ ಶಾಜಿ) ಹಾವುಗಳ ಬಗ್ಗೆ ಎಚ್ಚರಿಕೆಯ ಕ್ರಮಗಳು, ಹಾವು ಕಂಡ ತಕ್ಷಣ ಕರೆ ಮಾಡಬೇಕು. ಸೂಕ್ಷ್ಮವಾಗಿ ಅಡಗಿರುವ ಜಾಗ ಗಮನಿಸಿ ವಿಷಯ ಮುಟ್ಟಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ಎಲ್ಲಾ ಸಾರ್ವಜನಿಕರು ಈ ತಿಂಗಳ 22 ನೇ ತಾರೀಕಿನಿಂದ ಪ್ರಾರಂಭವಾಗುವ ಶೈಕ್ಷಣಿಕ ಗಣತಿಯಲ್ಲಿ ಭಾಗವಹಿಸಲು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಕರೆ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ರೇಬೀಸ್ ವಿರುದ್ಧ ಸಾಕು ಪ್ರಾಣಿಗಳಿಗೆ ಉಚಿತವಾಗಿ ದೊರೆಯುವ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಉಪನಿರ್ದೇಶಕರು ಮನವಿ ಮಾಡಿದರು.
ತರಬೇತಿಯಲ್ಲಿ 80 ಕ್ಕೂ ಹೆಚ್ಚು ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚೈತ್ರಾ, ಪ್ರಶಾಂತ, ಡಾ. ಜಮೀರ್ ಅಹಮದ್ ಮತ್ತಿತರರು ಇದ್ದರು.