ಸಮಸ್ಯೆಗಳಿಗೆ ಬಸವ ತತ್ವದಲ್ಲಿದೆ ಪರಿಹಾರ

18 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಲ್ಲ ಕ್ಷೇತ್ರಗಳು ಗೊಂದಲಗಳಿಂದ ಕೂಡಿರುವ ಇಂದಿನ ಕಾಲದಲ್ಲಿ ಶರಣರ ವಚನಗಳಲ್ಲಿ ಪರಿಹಾರವಿದೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವವರೇ ಹೆಚ್ಚಾಗುತ್ತಿದ್ದಾರೆ. ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಕಾಯಕ ಜೀವಿಗಳಿಂದ ವಚನ ಸಾಹಿತ್ಯವನ್ನು ಸಮಾಜಕ್ಕೆ ನೀಡಿದ ಬಸವಣ್ಣನವರು ಎಂದೆಂದಿಗೂ ಮಾದರಿ. ಇಂದಿನ ಭ್ರಷ್ಟ ವ್ಯವಸ್ಥೆಗೆ ವಚನಗಳು ಔಷಧಿಯಾಗಿವೆ ಎಂದು ಮಾಜಿ ಸಚಿವ ಎಸ್​.ಎಸ್​.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಗಣಕರಂಗ ಸಂಸ್ಥೆ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಲೇಖನ ಸ್ಪರ್ಧೆಯ ಆಯ್ದ ಲೇಖನಗಳನ್ನೊಳಗೊಂಡ, ಸಿದ್ಧರಾಮ ಹಿಪ್ಪರಗಿ ಸಂಪಾದಿತ "ಬಸವಣ್ಣ; ಕರುನಾಡಿನ ಸಾಂಸ್ಕೃತಿಕ ನಾಯಕ' ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಡೀ ಜಗತ್ತು ಬಸವಣ್ಣನವರ ವಚನಗಳನ್ನು ಪರಾರ್ಮಶಿಸಿಕೊಂಡು, ಉತ್ತಮ ಅಂಶಗಳನ್ನು ಅನುವಾದಿಸಿಕೊಂಡು ತಮ್ಮೊಳಗೆ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮವರು ಅವುಗಳ ಮಹತ್ವ ಅರಿತುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃತಿ ಕುರಿತು ಡಾ.ಬಸು ಬೇವಿನಗಿಡದ ಮಾತನಾಡಿ, ನಾಡಿನ ವಿವಿಧ ಮೂಲದ ಸುಮಾರು 80 ಲೇಖಕರ ವೈಚಾರಿಕ ಲೇಖನಗಳ ಈ ಕೃತಿ ಇಂದಿನ ಕಾಲದ ಓದಿನ ಅಗತ್ಯವಾಗಿದೆ. ಈ ಕೃತಿಯು ಸಂಪಾದಿತ ಕೃತಿಯಂತೆ ಭಾಸವಾಗದೆ ಹಲವರು ಅನುಭವ ಮಂಟಪದಲ್ಲಿ ಕುಳಿತು ಅಂದಿನ ಬಸವಣ್ಣನವರನ್ನು ಇಂದಿನ ಕಾಲದಲ್ಲಿ ಆಧುನಿಕತೆಯೊಂದಿಗೆ ಚರ್ಚಿಸುವಂತಿದೆ ಎಂದರು.
ಪತ್ರಕರ್ತ ಡಾ.ಬಸವರಾಜ ಹೊಂಗಲ, ಡಾ.ಪುಷ್ಪಾವತಿ ಶಲವಡಿಮಠ, ಶ್ರೀಧರ ಗಸ್ತಿ, ಡಾ.ವಿಜಯಕುಮಾರ ಕಮ್ಮಾರ ಮಾತನಾಡಿದರು. ಗಣಕರಂಗ ಆಯೋಜಿಸಿದ್ದ ಬಸವ ಜಯಂತಿ ಸ್ಪರ್ಧೆ, ಕಥಾಸ್ಪರ್ಧೆ, ಬುದ್ಧ ಭಾರತ ಕಿರು ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಿದ್ದರಾಮ ಹಿಪ್ಪರಗಿ ಸ್ವಾಗತಿಸಿದರು. ಶಿವಾನಂದ ನಾಗೂರ ನಿರೂಪಿಸಿದರು. ರವಿ ಚಲವಾದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net