

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವೀರಾಪುರ ಸೇರಿ ಹಲವು ಗ್ರಾಮಗಳ ಮಾರ್ಗವಾಗಿ ಬಿಬಿಎಂಪಿ ಕಸ ತುಂಬಿದ ಲಾರಿಗಳ ಸಂಚಾರ ಮಿತಿ ಮೀರಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿಲ್ಲಿಸಬೇಕು ಎಂದು ಆಗ್ರಹಿಸಿ ಕೊಡಿಗೇಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿಗಳನ್ನು ತಡೆದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭಾ ಸದಸ್ಯ ವೆಂಕಟೇಶ್ ಮಾತನಾಡಿ, ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಪ್ರತಿದಿನ ನೂರಾರು ಲಾರಿಗಳು ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿವೆ. ಕಸ ತುಂಬಿದ ಲಾರಿಗಳು ಇಷ್ಟು ವರ್ಷಗಳಿಂದಲೂ ದಾಬಸ್‌ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತಿದ್ದವು. ಆದರೆ, ಹುಲಿಕುಂಟೆ ಸಮೀಪ ಟೋಲ್ ಪ್ರಾರಂಭವಾದ ನಂತರ ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಈಗ ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಹಳ್ಳಿಗಳ ಮೂಲಕ ಸಂಚರಿಸುತ್ತಿವೆ ಎಂದರು.
ಇದೇ ರಸ್ತೆಯಲ್ಲಿಯೇ ಸಿಮೆಂಟ್ ತುಂಬಿದ ಲಾರಿಗಳು ಸಂಚರಿಸುತ್ತಿವೆ. ಈಗ ಇವುಗಳೊಂದಿಗೆ ಕಸ ತುಂಬಿದ ಲಾರಿಗಳ ಸಂಚಾರ ಮಿತಿ ಮೀರಿದೆ. ಇದೇ ರಸ್ತೆ ಮೂಲಕ ಕೈಗಾರಿಕಾ ಪ್ರದೇಶದಲ್ಲಿನ ಗಾಮೆರ್ಂಟ್ಸ್‌ಗಳಿಗೆ ಸಾವಿರಾರು ಮಹಿಳಾ ಉದ್ಯೋಗಿಗಳು ನಡೆದುಕೊಂಡು, ಆಟೋ ಹಾಗೂ ಗಾಮೆರ್ಂಟ್ಸ್‌ನ ಖಾಸಗಿ ಬಸ್‌ಗಳ ಮೂಲಕ ಹೋಗುತ್ತಾರೆ. ಇಷ್ಟೊಂದು ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಟೋಲ್ ಶುಲ್ಕ ಉಳಿಸುವ ನೆಪದಲ್ಲಿ ಕಸದ ಲಾರಿಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಬಿಬಿಎಂಪಿ ಕಸದ ಲಾರಿಗಳಿಗೆ ಹಲವರು ಬಲಿಯಾದ ಉದಾಹರಣೆಗಳು ಕಣ್ಮುಂದಿದೆ. ಇಂತಹ ಲಾರಿಗಳಿಂದ ನಮ್ಮೂರಿನ ಭಾಗದಲ್ಲೂ ಅನಾಹುತ ತಡೆಯಲು ಲಾರಿಗಳ ಸಂಚಾರ ತಡೆದು ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಕಸದ ಲಾರಿಗಳು ಈ ಮಾರ್ಗದಲ್ಲಿ ಮತ್ತೊಮ್ಮೆ ಸಂಚರಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ಲಾರಿಗಳನ್ನು ಬಿಟ್ಟುಕಳುಹಿಸಿದ್ದಾರೆ.
ಹೆಚ್ಚಿದ ಲಾರಿಗಳ ಸಂಖ್ಯೆ
ಬೆಂಗಳೂರಿನ ಮಹದೇವಪುರ ವ್ಯಾಪ್ತಿಯ ಘಟಕಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದೆ ಇರುವುದನ್ನು ಖಂಡಿಸಿ ಸುತ್ತುಮುತ್ತಲಿನ ಗ್ರಾಮಗಳ ಜನರು ಕಸ ತುಂಬಿದ ಲಾರಿಗಳು ಬಾರದಂತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಸ ವಿಲೇವಾರಿ ಘಟಕಕ್ಕೆ ದಿನನಿತ್ಯ ಬರುವುದಕ್ಕಿಂತಲು ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ಇಲ್ಲಿಗೆ ಬರುತ್ತಿವೆ. ಇದರಿಂದಾಗಿ ಕಸ ತುಂಬಿದ ಲಾರಿಗಳ ಅವಾಂತರ ಮತ್ತಷ್ಟು ಹೆಚ್ಚಾಗಿದೆ. ಗ್ರಾಮದ ಮೂಲಕ ಕಸ ತುಂಬಿದ ಲಾರಿಗಳು ಹೋಗುವಾಗ ಬರುವಾವ ದುರ್ನಾತ ಹಾಗೂ ರಸ್ತೆಯುದ್ದಕ್ಕೂ ಲಾರಿಯಿಂದ ಸೋರುತ್ತಿರುವ ತ್ಯಾಜ್ಯ ನೀರಿನಿಂದ ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗಾಮೆರ್ಂಟ್ಸ್‌ಗಳಿಗೆ ಹೋಗುವ ಮಹಿಳೆಯೊಬ್ಬರು ದೂರಿದ್ದಾರೆ.