ಸಿಸೇರಿಯನ್ ಹೆರಿಗೆ ತಗ್ಗಿಸಲು ಎಸ್‌ಎಂಟಿಐ

mysore
Published on

ಮೈಸೂರು: ನಗರದ ಚೆಲುವಾಂಬ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣವನ್ನು ಕಡಿಮೆ ಮಾಡಿ, ಸಹಜ ಹೆರಿಗೆ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಅದಕ್ಕಾಗಿ ಎಸ್‌ಎಂಟಿಐ (ಸ್ಟೆಟ್ ಮಿಡ್‌ವೈಫರಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ತರಬೇತಿ ಕೇಂದ್ರ ತೆರೆಯಲಾಗಿದೆ.


ಸಹಜ ಹೆರಿಗೆಯನ್ನೇ ಮಾಡಿಸುವ ದಾದಿಯರನ್ನು ಸೃಷ್ಟಿಸಲು ತರಬೇತಿ ಕೇಂದ್ರವನ್ನು ಆರಂಭಿಸಿದ್ದು ಈಗಾಗಲೇ ಮೊದಲ ತಂಡದಲ್ಲಿ 20 ಜನರಿಗೆ ಒಂದು ವರ್ಷದ ತರಬೇತಿ ನೀಡಲಾಗಿದೆ. 6 ತಿಂಗಳಲ್ಲಿ ತಂಡ ಸೇವೆ ನೀಡಲು ಸನ್ನದ್ಧವಾಗಲಿದೆ. ತರಬೇತಿ ಪಡೆದ ದಾದಿಯರು ತಾಲೂಕು ಹಾಗೂ ಜಿಲ್ಲಾ ಮಟ್ಟದ ಹೆರಿಗೆ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮಾಡಿಸುವ ಕೆಲಸದಲ್ಲಿ ಸಕ್ರಿಯವಾಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.


ಈ ಆಸ್ಪತ್ರೆಯಲ್ಲಿರುವ ವಾರ್ಡ್‌ವೊಂದನ್ನು ತರಬೇತಿ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ನವೀಕೃತ ವಾರ್ಡ್‌ನಲ್ಲಿ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನಂತರ ನಗರದ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಸ್ಥಾಪನೆಯಾಗುತ್ತಿರುವ ರಾಜ್ಯದ 2ನೇ ತರಬೇತಿ ಕೇಂದ್ರ ಇದಾಗಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳ ಕಾಯಂ ಶುಶ್ರೂಷಕಿಯರನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ತರಬೇತಿ ಪಡೆದ ಇವರು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಹೆರಿಗೆ ಆಸ್ಪತ್ರೆಗಳಲ್ಲಿ ಕಡಿಮೆ ಅಪಾಯವಿರುವ ಗರ್ಭಿಣಿಯರನ್ನು ಆಯ್ಕೆ ಮಾಡಿಕೊಂಡು ಸಹಜ ಹೆರಿಗೆ ಮಾಡಿಸುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಯಿಂದ ಹೆರಿಗೆ ಮಾಡಿಸುವ ಪ್ರಮಾಣ ಕಡಿಮೆ ಮಾಡಲು ಕ್ರಮ ವಹಿಸಲಾಗಿದೆ.


ಜಿಲ್ಲಾ ಮಟ್ಟದ ಹೆರಿಗೆ ಆಸ್ಪತ್ರೆಗಳಲ್ಲಿ ವಾರ್ಷಿಕ ಶೇ.20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಿಸೇರಿಯನ್‌ಗಳಾಗಬೇಕು. ಆದರೆ, ಅಕ್ಕಪಕ್ಕದ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸಹಜ ಹೆರಿಗೆಗಳನ್ನು ಅಲ್ಲಿಯೇ ಮಾಡಿ, ಸಮಸ್ಯೆ ಇರುವ ಹೆರಿಗೆ ಪ್ರಕರಣಗಳನ್ನು ನಗರದ ಚೆಲುವಾಂಬ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಇದರಿಂದಾಗಿ ಈ ಆಸ್ಪತ್ರೆಯಲ್ಲಿ ಶೇ.35 ಹೆರಿಗೆಗಳನ್ನು ಶಸ್ತ್ರ ಚಿಕಿತ್ಸೆಯಿಂದ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net