

ಉಡುಪಿ: ಗುರು-ಶುಕ್ರರ ಬಳಿಗೆ ರವಿ ಬಂದಾಗ ಗುರು- ಶುಕ್ರ ಶಕ್ತಿಗಳು ಲೋಕಕ್ಕೆ ಸಿಗಲಾರದು. ಆದುದರಿಂದಲೇ ಆಗ ಗುರು ಬಲ ಅಥವಾ ಶುಕ್ರ ಬಲವಿಲ್ಲ ಎಂದು ಪರಿಗಣಿಸಲಾಗುವುದು. ಇದು ಎಲ್ಲರಿಗೂ ಸಂಬಂಧ ಪಡುತ್ತದೆ. ಮೌಢ್ಯಕಾಲ ಶುಭಕರ್ಮಗಳಿಗೆ ಪ್ರಶಸ್ತವಲ್ಲ ಎಂದು ಹಿರಿಯ ವಿದ್ವಾಂಸ ಪ್ರೊ.ಸಾಲಿಗ್ರಾಮ ಶ್ರೀನಿವಾಸ ಅಡಿಗ ಹೇಳಿದರು.
ಇತ್ತೀಚೆಗೆ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸತ ಮಹಾವಿದ್ಯಾಲಯದಲ್ಲಿ ಕಾವ್ಯ ಶಾಸ್ತ್ರ್ರ ವಿಚಾರ ಪರಿಷತ್ತಿನ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗುರು-ಶುಕ್ರಾಸ್ತ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಗುರು ಗ್ರಹನಿಗೆ ಜೀವ ಎಂದು ಹೆಸರು. ಎಲ್ಲಾ ಜನರಿಗೂ ಕೆಲಸಗಳಿಗೂ ಜೀವತುಂಬುವವನೀತ. ಗುರುವು ಜ್ಞಾನದ ಮೂಟೆಯಾಗಿದ್ದಾನೆ. ಆದ್ದರಿಂದ ಜ್ಞಾನಸಂಪಾದನೆಯಲ್ಲಿ ಪ್ರಧಾನ ಸಂಸ್ಕಾರವೆನಿಸಿದ ಉಪನಯನವು ಗುರು ಅಸ್ತವಾಗಿರುವಾಗ ವಿಫಲವಾಗುತ್ತದೆ. ಹಾಗೆಯೇ ಶುಕ್ರನು ಸುಖಕಾರಕನಾಗಿದ್ದಾನೆ. ಸುಖಕ್ಕಾಗಿಯೇ ಎಲ್ಲಾ ಕೆಲಸಗಳು ನಡೆಯುವಾಗ ಶುಕ್ರ ಬಲ ಅನಿವಾರ್ಯವಾಗುವುದು. ವಿಶೇಷವಾಗಿ ವಿವಾಹಕ್ಕೆ ಶುಕ್ರ ಬಲ ಅಗತ್ಯವಾಗಿದೆ. ಗ್ರಹರ ಮೌಢ್ಯಕ್ಕಿಂತ ಮೊದಲು ಏಳು ದಿನ ವೃದ್ಧತ್ವ ಹಾಗೂ ಮೌಢ್ಯಕಳೆದು ಉದಯವಾದ ಬಳಿಕ ಏಳು ದಿನ ಬಾಲ್ಯಾವಾಸ್ಥೆ ಎಂದೂ ಶುಭಕರ್ಮಗಳಿಗೆ ವರ್ಜ್ಯಕಾಲವಾಗಿದೆ ಎಂದು ಹೇಳಿದರು.
ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಭಾದ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯೀಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ವಿ. ರಾವ್, ವಿದ್ವಾನ್ ಮುರಳೀಧರ ತಂತ್ರೀ ಮತ್ತು ಕಾವ್ಯಶಾಸ್ತ್ರ ವಿಚಾರಪರಿಷತ್ತಿನ ಕಾರ್ಯದರ್ಶಿ ಡಾ.ಮಹೇಶಭಟ್ಟ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಿಯಂತ ಭಟ್ ಪ್ರಾರ್ಥಿಸಿದರು. ಪ್ರೊ. ಶಿವಪ್ರಸಾದ ತಂತ್ರಿ ಸ್ವಾಗತಿಸಿದರು. ವಿದ್ಯಾರ್ಥಿ ಗಜಾನನ ಭಟ್ಟ ಕಾರ್ಯಕ್ರಮ ನಿರೂಪಿಸಿದರು.