

ಸೋಮವಾರಪೇಟೆ: ತಾಲ್ಲೂಕಿನ ಸಿದ್ಧಲಿಂಗಪುರ-ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಮಹಾಶಿವರಾತ್ರಿ ಆಚರಿಸಲಾಯಿತು. ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮದೊಂದಿಗೆ ಶಿವರಾತ್ರಿ ಜಾತ್ರೋತ್ಸವ ಪ್ರಾರಂಭವಾಯಿತು. ನಂತರ 6 ಗಂಟೆಗೆ ಶ್ರೀಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಿತು. ನಂತರ ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆದವು. 1108 ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕ ನಡೆಯಿತು. ಪ್ರತಿಯಾಮದಲ್ಲೂ ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ನಡೆಯಿತು.
ಕ್ಷೇತ್ರದ ಗುರುಗಳಾದ ಶ್ರೀರಾಜೇಶ್‌ನಾಥ್ ಜಿ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಗಳು ನಡೆದವು. ಈ ಸಂದರ್ಭ ದೇವಾಲಯದ ಜೀಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ಮುದ್ದಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ. ಮೋಹನ್ ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು..