ಧರ್ಮಸ್ಥಳಕ್ಕೆ ಬೃಹತ್ ವಾಹನ ಜಾಥಾ

SMPT Sdm
Published on

* ಪ್ರಕರಣದ ತನಿಖೆಗೆ ಮುಖಂಡರ ಆಗ್ರಹ

* ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜನೆ

* ದರ್ಶನ ಪಡೆದ 500ಕ್ಕೂ ಹೆಚ್ಚು ಭಕ್ತರು

ಸೋಮವಾರಪೇಟೆ : ತಾಲೂಕಿನ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಸೋಮವಾರಪೇಟೆ ಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ಬೃಹತ್ ವಾಹನ ಜಾಥಾ ನಡೆಸಲಾಯಿತು. ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಮುಂಜಾನೆ ಜಾಥಾಗೆ ಚಾಲನೆ ನೀಡಲಾಯಿತು. ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ತಾಲೂಕು ಸಂಚಾಲಕ ಸುಭಾಷ್, ಸಮಿತಿ ಹಿರಿಯ ಸದಸ್ಯ ಬಿ.ಜೆ. ದೀಪಕ್ ನೇತೃತ್ವ ವಹಿಸಿದ್ದರು.

150 ವಾಹನಗಳಲ್ಲಿ 500ಕ್ಕೂ ಹೆಚ್ಚು ಭಕ್ತರು ಶುಕ್ರವಾರಸಂತೆ, ದೋಣಿಗಲ್ಲು, ಗುಂಡ್ಯ ಮಾರ್ಗವಾಗಿ ಧರ್ಮಸ್ಥಳ ತಲುಪಿದರು. ದೇವಾಲಯ ಆವರಣಕ್ಕೆ ಮೆರವಣಿಗೆ ಮೂಲಕ ಪ್ರವೇಶಿಸಿದ ಭಕ್ತರು ದೇವರ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭ ಮಾತನಾಡಿದ ಸೋಮವಾರಪೇಟೆ ತಾಲೂಕು ಸಂಚಾಲಕ ಸುಭಾಷ್,

ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಸಂಚು ರೂಪಿಸಿದ ದುಷ್ಕರ್ಮಿಗಳಿಗೆ ಶಿಕ್ಷೆ ಆಗಬೇಕು.  ಎಸ್‌ಐಟಿಯಿಂದ ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಸಮಿತಿ ಹಿರಿಯ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, 800 ವರ್ಷದ ಇತಿಹಾಸ ಇರುವಧರ್ಮಸ್ಥಳದ ಮೇಲಿನ ಶ್ರದ್ಧೆ ಮತ್ತು ನಂಬಿಕೆಗಳು ಭಕ್ತರಿಗೆ ಅಚಲವಾಗಿವೆ.

ಆದರೆ ತಲೆ ಬುರುಡೆ ಪ್ರಕರಣದ ವಿಚಾರದಲ್ಲಿ ಇನ್ನೂ ಯಾರ‌್ಯಾರ ಕೈವಾಡವಿದೆ ಎಂಬುದು ಬಹಿರಂಗವಾಗಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸಂಘಟನೆಯ ತಾಲೂಕು ಸಹ ಸಂಚಾಲಕ ಶಶಿಕಾಂತ ಬಜೆಗುಂಡಿ,ಸದಸ್ಯರಾದ ಸುನೀಲ್ ಮಾದಾಪುರ, ಭೋಜೇಗೌಡ, ಎಂ.ಬಿ.ಉಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net