

ಸೋಮವಾರಪೇಟೆ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಭಾಗ್ಯಮ್ಮ ಹೇಳಿದರು. ಸಂತ ಜೋಸೆಫರ ವಿದ್ಯಾಸಂಸ್ಥೆಯ ಪ್ರಾಥಮಿಕ-ಪ್ರೌಢಶಾಲೆ ವಿಭಾಗ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಯುಗದಲ್ಲಿ ಯಶ ಕಾಣಬೇಕಾದರೆ ಜ್ಞಾನ ಅವಶ್ಯಕ. ನಿರಂತರ ಓದಿನಿಂದ ಮಾತ್ರ ಜ್ಞಾನ ಸಂಪಾದಿಸಬಹುದು. ಮಕ್ಕಳ ಆಸಕ್ತಿ ಗುರುತಿಸಿ ಪಾಲಕರು ಮತ್ತು ಶಿಕ್ಷಕರು ಉತ್ತೇಜನ ನೀಡಬೇಕಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿದೆ:
ಹಟ್ಟಿಹೊಳೆ ಧರ್ಮಕೇಂದ್ರದ ಫಾದರ್ ಗಿಲ್ಬರ್ಟ್ ಡಿಸಿಲ್ವಾ ಮಾತನಾಡಿ, ಸೃಷ್ಟಿಯಲ್ಲಿ ಎಲ್ಲವೂ ವಿಜ್ಞಾನವೇ ಆಗಿದೆ ಎಂದರು. ವಿದ್ಯಾರ್ಥಿಗಳು ಪ್ರತಿಯೊಂದನ್ನೂ ವಿಜ್ಞಾನದ ಮೂಲದಿಂದ ಚಿಂತಿಸಲು ಆರಂಭಿಸಬೇಕು. ವೈಜ್ಞಾನಿಕ ಚಿಂತನೆಗಳಿಗೆ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು. ಪ್ರಸ್ತುತ ಕೃತಕ ಬುದ್ಧಿಮತ್ತೆ ಎಂಬುದು ನಾಗಾಲೋಟದಿಂದ ಬೆಳೆಯುತ್ತಿದೆ. ಇದರ ಸೃಷ್ಟಿ ಮನುಷ್ಯನಿಂದಲೇ ಆಗಿದ್ದರೂ ನಮ್ಮ ಮಿದುಳಿನ ಶಕ್ತಿಯನ್ನು ಮೀರಿಸುವಷ್ಟು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮುಂದುವರಿದಿದೆ ಎಂದರು.