

ಸೋಮವಾರಪೇಟೆ: ಮಂಗಳೂರಿನಲ್ಲಿ ಹಿಂದುಪರ ಸಂಘಟನೆಯ ಮುಖಂಡ ಸುಹಾಸ್ ಶೆಟ್ಟಿ ಹತ್ಯೆಗೀಡಾದ ಪ್ರಕರಣ ಖಂಡಿಸಿ, ಹಿಂದು ಸುರಕ್ಷಾ ಸಮಿತಿಯ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಈ ಸಂದರ್ಭ ಮಾತನಾಡಿ, ಸುಹಾಸ್ ಬಳಿಯಿದ್ದ ಆತ್ಮರಕ್ಷಣೆಯ ಶಸ್ತ್ರಗಳನ್ನು ತಿಂಗಳ ಹಿಂದೆಯೇ ಪೊಲೀಸರೇ ವಶಕ್ಕೆ ಪಡೆದಿದ್ದಾರೆ. ಈ ವಿಷಯ ತಿಳಿದ ಮತಾಂಧರು ಹೊಂಚು ಹಾಕಿ ಹತ್ಯೆ ಮಾಡಿದ್ದಾರೆ. ಇದು ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು. ಹತ್ಯೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಸ್ಲಾಮಿಕ್ ಭಯೋತ್ಪಾದನೆಯನ್ನು ಬೇರುಸಹಿತ ಕೀಳಬೇಕು. ತಪ್ಪಿದರೆ ಹಿಂದು ಸಮಾಜ ಇನ್ನಷ್ಟು ತೊಂದರೆಗೆ ಸಿಲುಕಲಿದೆ. ರಾಜಕೀಯ ಬದಿಗಿಟ್ಟು ಹಿಂದುಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆಯಿದೆ ಎಂದರು.
ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಲವ್ ಜಿಹಾದ್, ಗೋಹತ್ಯೆ ಸೇರಿದಂತೆ ಹಿಂದು ಧರ್ಮದ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿದಕ್ಕೆ ಪೊಲೀಸ್ ಇಲಾಖೆ ಇವರಿಗೆ ರೌಡಿ ಶೀಟರ್ ಪಟ್ಟ ಕಟ್ಟಿದೆ ಎಂದು ಅರೋಪಿಸಿದರು. ಶೆಟ್ಟಿ ಯಾವುದೇ ಕ್ರಿಮಿನಲ್ ಚಟುವಟಿಕೆ ಮಾಡಿಲ್ಲ ಎಂಬುದನ್ನು ಹಿಂದುಗಳು ಮನಗಾಣಬೇಕಿದೆ ಎಂದರು.
ಮುಖಂಡ ಸುನಿಲ್ ಮಾದಾಪುರ ಮಾತನಾಡಿ, ಈಗಾಗಲೇ ಕೊಡಗಿನಲ್ಲಿ ಬಾಂಗ್ಲಾ ವಲಸಿಗರು ಅಸ್ಸಾಮಿಗರ ಸೋಗಿನಲ್ಲಿ ಬಂದು ನೆಲೆಸಿದ್ದಾರೆ. ಹಿಂದು ಸಮಾಜ ಭದ್ರತೆಯ ದೃಷ್ಟಿಯಿಂದ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಜಾತಿ ಬಿಟ್ಟು ಇಡೀ ಹಿಂದುಗಳು ಒಗ್ಗಟ್ಟಾಗಬೇಕು ಎಂದರು. ವಿವಿಧ ಸಂಘಟನೆಗಳ ಮುಖಂಡರಾದ ಸುಭಾಷ್ ತಿಮ್ಮಯ್ಯ, ಉಮೇಶ್ ಎಂ.ಬಿ., ಕೂತಿ ಪರಮೇಶ್, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಇದ್ದರು.