ಕಂದಾಯ ಇಲಾಖೆ ಸಮಸ್ಯೆ ಪರಿಹರಿಸಿ

Oplus_131074
Oplus_131074
Published on

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹ
ಸೋಮವಾರಪೇಟೆ : ಕೇಂದ್ರ ಸ್ಥಾನದಲ್ಲಿರದ ಕಂದಾಯ ಇಲಾಖೆ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿದೆ. ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ನೇತೃತ್ವದಲ್ಲಿ ಸಮಿತಿ ಸದಸ್ಯರ ನಿಯೋಗ ಶನಿವಾರ ತಹಸೀಲ್ದಾರ್ ಶ್ರೀಧರ ಕಂಕನವಾಡಿ ಅವರನ್ನು ಭೇಟಿಯಾಗಿ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿತು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂಬ ನಿಯಮ ಇದೆ. ಹಾಗಿದ್ದೂ ಹಲವು ಅಧಿಕಾರಿಗಳು ಸೋಮವಾರಪೇಟೆಯಲ್ಲಿ ನೆಲೆಸಿಲ್ಲ. ಕಂದಾಯ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಯನ್ನು ತಕ್ಷಣ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿದರು.
ಸ್ಪಂದನೆ ಲಭಿಸುತ್ತಿಲ್ಲ: ಸಮಸ್ಯೆ ಬಗೆಹರಿಸಲು ಹಲವು ತಿಂಗಳಿನಿಂದ ತಾಲೂಕು ಕಚೇರಿಗೆ ಅನೇಕ ಮನವಿ ಪತ್ರ ನೀಡಲಾಗಿದೆ. ಆದರೆ ಪ್ರಗತಿಯ ಮಾತ್ರ ಶೂನ್ಯವಾಗಿದೆ. ಸಿ ಮತ್ತು ಡಿ ಜಾಗ ಸಮಸ್ಯೆ, ಕಂದಾಯ ಭೂಮಿಗೆ ದಾಖಲೆ ನೀಡದೇ ಎದುರಾಗಿರುವ ಸಮಸ್ಯೆಗಳು, ಬಗರ್‌ಹುಕುಂ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ, ಪೋಡಿ, ದುರಸ್ತಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಕಂದಾಯ ಇಲಾಖೆಯಿಂದ ಯಾವುದೇ ಸ್ಪಂದನೆ ಲಭಿಸುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ದೂರಿದರು.
ಶಾಂತಳ್ಳಿ ಹೋಬಳಿ ನಾಡಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಹಲವು ಕಚೇರಿಗಳಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ಸಮಯ ಪಾಲನೆ ಮಾಡುತ್ತಿಲ್ಲ. ತಾಲೂಕು ಕಚೇರಿಯನ್ನೂ ಒಳಗೊಂಡಂತೆ ಕಂದಾಯ ಇಲಾಖೆಯ ಇತರ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಪ್ರಮುಖರು ಒತ್ತಾಯಿಸಿದರು.
ಕ್ರಮ ವಹಿಸಲಾಗುವುದು: ತಹಸೀಲ್ದಾರ್ ಶ್ರೀಧರ ಪ್ರತಿಕ್ರಿಯಿಸಿ ತಾಲೂಕು ಕಚೇರಿಯಲ್ಲಿ ಬಯೋಮೆಟ್ರಿಕ್ ಪದ್ಧತಿ ಅಳವಡಿಸ ಲಾಗುವುದು. ಅರ್ಜಿಗಳನ್ನು ನನ್ನ ಹಂತದಲ್ಲೇ ವಿಲೇವಾರಿ ಮಾಡಲು ಕ್ರಮ ವಹಿಸುವೆ ಎಂದು ಭರವಸೆ ನೀಡಿದರು. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ ತಮ್ಮಯ್ಯ, ಪದಾಧಿಕಾರಿಗಳಾದ ಜಿ.ಎಂ.ಹೂವಯ್ಯ, ಮಂಜೂರು ತಮ್ಮಣ್ಣಿ, ಸುಲೈಮಾನ್, ನ.ಲ.ವಿಜಯ, ತ್ರಿಶೂಲ್, ಅನಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net