ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ನಾವು ಪ್ರತಿಷ್ಠಾನದಿಂದ ಗೌರವಿಸಲಾಯಿತು.
ಯುವಿನ್ ಅಕಾಡೆಮಿಯಲ್ಲಿ ಷಟಲ್ ಬ್ಯಾಡ್ಮಿಂಟನ್ ತರಬೇತಿ ಪಡೆದು ಕಾಲೇಜು ಹಂತ, ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸೋಮವಾರಪೇಟೆಯ ಅಕ್ಷಯ್ ಮುರಳೀಧರ, ಯಡೂರು ಗ್ರಾಮದ ಧನ್ಯಾ ಸತೀಶ್, ಪುಷ್ಪಾಂಜಲಿ ನಾಗೇಶ್, ಹಿರಿಕರ ಜೀವಿತಾ ರಮೇಶ್, ಸೋಮವಾರಪೇಟೆಯ ಲಿಖಿತ್ ಕೃಪಾಲ್ ಅವರನ್ನು ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಪಾಲಕರ ಸಮ್ಮಖವೇ ಗೌರವಿಸಿದ್ದು ವಿಶೇಷವಾಗಿತ್ತು.
ಸೌಲಭ್ಯಗಳ ಕೊರತೆ: ಕೋಚ್ ಗೌತಮ್ ಕಿರಗಂದೂರು ಈ ಸಂದರ್ಭ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರು ಸೌಲಭ್ಯಗಳ ಕೊರತೆಯಿಂದ ಅವಕಾಶ ವಂಚಿತರಾಗುತ್ತಿದ್ದಾರೆ ಎಂದರು. ಸೋಮವಾರಪೇಟೆ ಪಟ್ಟಣದಲ್ಲಿ ಬ್ಯಾಡ್ಮಿಂಟನ್ (ಸರ್ಕಾರದ) ಒಳಾಂಗಣ ಕ್ರೀಡಾಂಗಣವಿಲ್ಲ. ಹಲವು ಪ್ರತಿಭಾವಂತ ಕ್ರೀಡಾಪಟುಗಳು ಅಕಾಡೆಮಿಗಳಲ್ಲಿ ಹಣ ಕೊಟ್ಟು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆಟಗಾರರಿಗೆ ಸರಿಯಾದ ಕೋಚಿಂಗ್ ಸಿಗುತ್ತಿಲ್ಲ. ಹಾಗಾಗಿ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಕೊಡಗು ತಂಡ ಸೋಲು ಅನುಭವಿಸುವ ಸ್ಥಿತಿ ಬಂದಿದೆ ಎಂಬುದೇ ಬೇಸರಕರ ಎಂದರು.
ಕಲಿಕೆಗೆ ಪೂರಕ: ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯೂ ಮಾತನಾಡಿ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ ಹಾಗು ಮಾನಸಿಕ ಅರೋಗ್ಯ ವೃದ್ಧಿಸುತ್ತದೆ. ಇದು ಕಲಿಕೆಗೆ ಪೂರಕವಾಗಿದೆ ಎಂದು ಅಭಿಪ್ರಾಯಿಸಿದರು.