

ಸೋಮವಾರಪೇಟೆ : ಗೋಣೀಮರೂರು ಯಡುಂಡೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿ ನಿರ್ಮಾಣ ಮಾಡಿರುವ ಸಮುದಾಯ ಭವನವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಸುಸಜ್ಜಿತ ಸಮುದಾಯ ಭವನಗಳು ನಿರ್ಮಾಣ ವಾದರೆ ಸ್ಥಳೀಯರಿಗೆ ನೆರವಾಗಲಿದೆ ಎಂದರು. ನಗರ ಪ್ರದೇಶಗಳಲ್ಲಿ ದುಪ್ಪಟ್ಟು ಹಣವನ್ನು ನೀಡಿ ಸಮುದಾಯ ಭವನಗಳಲ್ಲಿ ಮಂಗಳ ಕಾರ್ಯಕ್ರಮಗಳನ್ನು ಮಾಡಲು ಗ್ರಾಮೀಣ ಜನರಿಗೆ ಕಷ್ಟವಾಗುತ್ತದೆ. ಗ್ರಾಮದಲ್ಲೇ ಭವನಗಳಿದ್ದರೆ ಉಪಯೋಗವಾಗಲಿದೆ ಎಂದು ಹೇಳಿದರು. ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ಭವನ ಇಂದು ಸೇವೆಗೆ ಸಮರ್ಪಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ, ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಹೊದ್ದೇಟ್ಟಿ ಗುಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎನ್.ಆರ್.ಮೋಹನ್, ತಾಪಂ ಮಾಜಿ ಸದಸ್ಯೆ ಸವಿತಾ ಈರಪ್ಪ, ಆಲೂರು ಸಿದ್ದಾಪುರ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ, ಸಿಇಒ ಲೀಲಾ ಕುಮಾರ್ ಇತರರು ಇದ್ದರು.