ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಲಿ

6spt6
Published on

ಸೋಮವಾರಪೇಟೆ : ಅಕಾಲಿಕ ಮಳೆ ಪರಿಣಾಮ ಕೊಡಗಿನಲ್ಲಿ ಕಳೆದ 10 ವರ್ಷಗಳಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಬೇಕು ಎಂದು ಸೋಮವಾರಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ದಿನೇಶ್ ಒತ್ತಾಯಿಸಿದರು.
ಕೂತಿ ಗ್ರಾಮದ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ರೈತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಫಿ ತೋಟಗಳು ಬಹುತೇಕ ರೋಗಪೀಡಿತವಾಗಿವೆ. ಬೆಳೆಗಾರರು ಸಾಲಗಾರರಾಗಿ ಸಂಕಷ್ಟದಲ್ಲಿದ್ದಾರೆ. ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸವಲತ್ತುಗಳನ್ನು ಒದಗಿಸಿ: ಕಾಫಿಯನ್ನು ಆಹಾರ ಬೆಳೆಯೆಂದು ಕೇಂದ್ರಸರ್ಕಾರ ಘೋಷಣೆ ಮಾಡಿದರೆ ಮಾತ್ರ, ಕಾಫಿ ಬೆಳೆಗಾರರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತವೆ. ವಿಶೇಷ ಸವಲತ್ತುಗಳನ್ನು ಒದಗಿಸದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಕಿತ್ತಳೆಯಂತೆ ಕಾಫಿಯೂ ಕಣ್ಮರೆಯಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ದಿನೇಶ್ ವಿಷಾದ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net