ವಿಶ್ವಕ್ಕೆ ಆಧ್ಯಾತ್ಮಿಕ ಜ್ಞಾನ ಹಂಚುವ ಕಾರ್ಯ ಹೆಚ್ಚಾಗಲಿ

Oplus_131074
Oplus_131074
Published on

ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ವಲಯದ ಪ್ರಧಾನ ಸಂಚಾಲಕಿ ಲಕ್ಷ್ಮೀ
ಸೋಮವಾರಪೇಟೆ : ವಿಶ್ವಕ್ಕೆ ಆಧ್ಯಾತ್ಮಿಕ ಜ್ಞಾನ ಹಂಚುವ ದೇಶ ನಮ್ಮ ಅಖಂಡ ಭಾರತ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ವಲಯದ ಪ್ರಧಾನ ಸಂಚಾಲಕಿ ಲಕ್ಷ್ಮೀ ಹೇಳಿದರು.
ಈಶ್ವರೀಯ ವಿವಿ ಪಟ್ಟಣದ ಅಟಲ್‌ಜೀ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಹಾಗು ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಆಧ್ಯಾತ್ಮಿಕ ದೇಶ. ಇಡೀ ಪ್ರಪಂಚಕ್ಕೆ ಅಂತರಂಗಶುದ್ಧಿಯ ಜ್ಞಾನ ಹಂಚುವ ಸಾಮರ್ಥ್ಯ ಇರುವುದು ನಮ್ಮ ದೇಶಕ್ಕೆ ಮಾತ್ರ. ಆಧುನಿಕ ಯುಗದಲ್ಲಿ ಮನಸ್ಸುಗಳು ಅನ್ಯ ವಿಷಯಗಳತ್ತ ಹಂಚಿಹೋಗಿರುವುದು ವಿಷಾದ. ಈ ಸಂದರ್ಭದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇರುವುದು ಅಧ್ಯಾತ್ಮಕ್ಕೆ ಮಾತ್ರ. ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯ ಎಂದರು.
ಕರ್ಮದಲ್ಲಿ ಶುದ್ಧತೆ ಇರಲಿ: ಲೋಕದ ಎಲ್ಲ ಜನರ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಅದು ಅಧ್ಯಾತ್ಮ ಜ್ಞಾನ ಮಾತ್ರ. ನಕಾರಾತ್ಮಕ ಚಿಂತನೆಯಿಂದ ದೂರ ಉಳಿಯಲು ಇದು ಎಲ್ಲರಿಗೂ ಸಹಕಾರಿಯಾಗಿದೆ. ಕರ್ಮದಲ್ಲಿ ಶುದ್ಧತೆಯಿಟ್ಟುಕೊಳ್ಳಬೇಕು. ಕರ್ಮ ಶ್ರೇಷ್ಠತೆ ಮಾತ್ರ ಮಾನವನನ್ನು ಮರಣಾನಂತರವೂ ಹಿಂಬಾಲಿಸುತ್ತದೆ ಎಂದು ಲಕ್ಷ್ಮೀ ಹೇಳಿದರು. ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಭಗವಂತ ದರ್ಶನ ಮುಖ್ಯ. ಈ ನಿಟ್ಟಿನಲ್ಲಿ ರಾಜಯೋಗವು ಸಹಕಾರಿಯಾಗಿದೆ. ದಿನದ 24 ಗಂಟೆಯಲ್ಲಿ ಕೇವಲ ಒಂದು ಗಂಟೆಯನ್ನು ಆಧ್ಯಾತ್ಮಿಕ ಚಟುವಟಿಕೆಗೆ ಮೀಸಲಾಗಿ ಇಡಬೇಕು. ಆಗ ಆರೋಗ್ಯ, ನೆಮ್ಮದಿ ನಮಗೆ ಲಭಿಸುತ್ತದೆ. ರಾಜಯೋಗ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದ ಜೊತೆಗೆ ವ್ಯಸನಮುಕ್ತ ಆಂದೋಲನವನ್ನೂ ನಮ್ಮ ವಿವಿಯಿಂದ ನಡೆಸಲಾಗುತ್ತಿದೆ ಎಂದರು.
ಜ್ಯೋತಿರ್ಲಿಂಗ ದರ್ಶನ ಉತ್ಸವಕ್ಕೆ ವಿರಕ್ತ ಮಠಾಧೀಶ ಶ್ರೀ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ವೀರಾಜಪೇಟೆ ಈಶ್ವರೀಯ ವಿವಿ ಕೇಂದ್ರದ ಸಂಚಾಲಕಿ ಕೋಮಲಾ ಮೈಸೂರು ವಿದ್ಯಾರಣ್ಯಪುರದ ಸಂಚಾಲಕಿ ಯತ್ನಾ, ಜಯಲಕ್ಷ್ಮೀಪುರಂ ಕೇಂದ್ರದ ಜಯಂತಿ, ಕುಶಾಲನಗರದ ಪಶುವೈದ್ಯ ಡಾ. ಮೋಟಯ್ಯ ಇತರರು ಇದ್ದರು.
ಉಚಿತ ಪ್ರವಚನ: ನವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಕಾರ್ಯಕ್ರಮವನ್ನು ಈಶ್ವರೀಯ ವಿವಿ ಹಮ್ಮಿಕೊಂಡಿದೆ. ಅ.12ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 8ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಅ.14ರಂದು ಮಿನಿ ವಿಧಾನಸೌಧ ಹಿಂಬದಿಯಲ್ಲಿರುವ ಈಶ್ವರೀಯ ವಿವಿ ಕೇಂದ್ರದ ಸಭಾಂಗಣದಲ್ಲಿ ‘ನೆಮ್ಮದಿಯ ಜೀವನಕ್ಕೆ ಧ್ಯಾನವೇ ದಿವ್ಯ ಔಷಧ’ ವಿಷಯದ ಬಗ್ಗೆ ಉಚಿತ ಪ್ರವಚನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net