ಸುಸೂತ್ರವಾಗಿ ನಡೆಯಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಧಿಕಾರಿಗಳಿಗೆ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಸೂಚನೆ

Siriguppa SSLC Prepation Meeting
ಸಿರಗುಪ್ಪದಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿದರು.
Published on

ಸಿರಗುಪ್ಪ: ಜು.19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

ನಗರದ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಪರೀಕ್ಷಾ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕರೊನಾ ಪ್ರಕರಣ ಕಡಿಮೆಯಾಗುತ್ತಿದೆ. ಮೂರನೇ ಅಲೆಯ ಭಯವಿದ್ದು, ಎಚ್ಚರವಹಿಸಬೇಕು. ಕರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ಪರೀಕ್ಷೆ ನಡೆಸಿ, ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಬಿಇಒ ಪಿ.ಡಿ.ಭಜಂತ್ರಿ ಮಾತನಾಡಿ, 26 ಪರೀಕ್ಷಾ ಕೇಂದ್ರಗಳಲ್ಲಿ 2265 ವಿದ್ಯಾರ್ಥಿಗಳು, 1807 ವಿದ್ಯಾರ್ಥಿನಿಯರು ಸೇರಿದಂತೆ 4072 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಎಂಟು ಮಾರ್ಗಗಳ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಗುತ್ತದೆ. ಪರೀಕ್ಷಾ ಕಾರ್ಯದಲ್ಲಿ ಮುಖ್ಯ ಅಧೀಕ್ಷಕರಾಗಿ 26 ಜನ, ಕಸ್ಟೋಡಿಯನ್, ಮೊಬೈಲ್ ಸ್ವಾಧೀನಾಧಿಕಾರಿಗಳು, ಸ್ಥಾನಿಕ ಜಾಗೃತ ದಳ, ದೈಹಿಕ ಶಿಕ್ಷಣ ಶಿಕ್ಷಕರು ತಲಾ 26 ಜನ, ಸ್ಕೌಟ್ಸ್ ಮತ್ತು ಗೈಡ್ಸ್‌ನ 78 ಜನ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ 30 ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ 346 ಕೊಠಡಿಗಳನ್ನು ಗುರುತಿಸಿದ್ದು, ಒಟ್ಟು 3035 ಡೆಸ್ಕ್‌ಗಳ ವ್ಯವಸ್ಥೆ ಮಾಡಲಾಗಿದೆ. 26 ವಿಶೇಷ ಕೊಠಡಿಗಳು ಮತ್ತು 2 ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಹೊರರಾಜ್ಯದಿಂದ ಪರೀಕ್ಷೆ ಬರೆಯಲು 19 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಪರೀಕ್ಷಾ ಸಿಬ್ಬಂದಿಯಲ್ಲಿ 621 ಜನಕ್ಕೆ ಲಸಿಕೆ ನೀಡಲಾಗಿದೆ. ನಮ್ಮ ಕಚೇರಿಯಿಂದ 2000 ಮತ್ತು ತಾಲೂಕು ಸ್ಕೌಟ್ ಮತ್ತು ಗೈಡ್ಸ್ ಘಟಕದಿಂದ 3000 ಮಾಸ್ಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಸಂಗ್ರಹಿಸಲಾಗಿದೆ ಎಂದರು. ನೋಡಲ್ ಅಧಿಕಾರಿ ಚನ್ನಬಸವನಗೌಡ, ಶಿಕ್ಷಕರಾದ ವಿಜಯ ರಂಗರೆಡ್ಡಿ, ಎಂ.ಸುರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net