ಭಾವಕ್ಕೆ ಜೀವ ತುಂಬುವ ಸುಗಮಸಂಗೀತ

mysore
Published on

ಮೈಸೂರು: ಸುಗಮ ಸಂಗೀತದಲ್ಲಿ ಕೇಳುಗರು ಭಾವ ತೀವ್ರತೆಯಲ್ಲಿ ಮುಳುಗಿ ಹೋಗುತ್ತಾರೆ. ಇದುವೇ ಈ ಕಲೆಯ ಶಕ್ತಿ ಎಂದು ಸಾಹಿತಿ ಪ್ರೊ. ಮೈಸೂರು ಕೃಷ್ಣಮೂರ್ತಿ ಹೇಳಿದರು.


ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್‌ನ 10ನೇ ವರ್ಷದ ಸಂಭ್ರಮ, 5ನೇ ವರ್ಷದ ರಾಜು ಅನಂತಸ್ವಾಮಿ ಗಾನಲಹರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸುಗಮಸಂಗೀತದ ಮೂಲಕ ಭಾವಕ್ಕೆ ಜೀವ ತುಂಬಬಹುದು. ಆ ಶಕ್ತಿ ಸುಗಮ ಸಂಗೀತ ನಿರ್ದೇಶಕರು, ಗಾಯಕರಿಗಿದೆ. ಕವಿ ರಚಿಸಿರುವ ಕಾವ್ಯ ಅಥವಾ ಭಾವಗೀತೆಯನ್ನು ಓದಿದ್ದರೆ ಏನು ಅರ್ಥವಾಗಲ್ಲ. ಇದರಲ್ಲಿ ಏನು ವಿಶೇಷ? ಎಂಬ ಭಾವನೆಯೂ ಮೂಡಬಹುದು. ಹೀಗಾಗಿ, ಭಾವ ಓದಿನಲ್ಲಿ ಧಕ್ಕುವುದಿಲ್ಲ. ಅದೇ ಭಾವಗೀತೆಯನ್ನು ಸುಗಮಸಂಗೀತ ಮೂಲಕ ಆಲಿಸಿದರೆ ಗೀತೆಯ ಅರ್ಥ, ಒಳಾರ್ಥ, ಒಳಸುಳಿವುಗಳು ಗೊತ್ತಾಗುತ್ತದೆ. ಇದು ಸುಗಮ ಸಂಗೀತದ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತದೆ. ಅದಕ್ಕಾಗಿ ಬಹಳಷ್ಟು ಜನರಿಗೆ ಈ ಕಲೆ ತ್ವರಿತವಾಗಿ ತಲುಪಿದೆ ಎಂದರು.


ಸುಗಮ ಸಂಗೀತ ನಿರ್ದೇಶಕರು, ಗಾಯಕರು ದೇವರುಗಳು ಎಂದು ವಿದ್ವಾಂಸರೊಬ್ಬರು ಹೇಳಿರುವುದು ನಿಜ. ಏಕೆಂದರೆ ಅದು ಭಾವಗೀತೆ ಸಾಹಿತ್ಯ, ಅದರಲ್ಲಿ ಭಾಷೆ, ಭಾವಗಳೆರಡೂ ಇರುತ್ತದೆ. ಭಾಷೆ ಅರ್ಥವಾಗದಿದ್ದರೆ ನಿಘಂಟಿನಲ್ಲಿ ನೋಡಿ ಅರ್ಥೈಸಿಕೊಳ್ಳಬಹುದು. ಆದರೆ ಭಾವಕ್ಕೆ ಅರ್ಥ ಹೇಳಲು ಆಗುವುದಿಲ್ಲ. ಭಾವ ಅನುಭವದ ಸಾಮರ್ಥ್ಯವನ್ನು ದೇವರು ಕೊಟ್ಟಿರುತ್ತಾನೆೆ ಎಂದರು.


ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಚಿಂತೆಗೀಡು ಮಾಡಿವೆ. ಕತ್ತಲಿನಿಂದ ಬೆಳಕಿನ ಕಡೆಗೆ ಸಮಾಜ ಹೋಗಬೇಕಿತ್ತು. ಆದರೆ ಇದೀಗ ಕತ್ತಲಿನಿಂದ ಇನ್ನಷ್ಟು ಕಗ್ಗತ್ತಲಿನ ಕಡೆಗೆ ಸಾಗುತ್ತಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಸಾಹಿತ್ಯ, ಸಂಗೀತದ ಮೂಲಕ ಕತ್ತಲಿನಿಂದ ಬೆಳಕಿನ ನಡೆಗೆ ಸಮಾಜ ಮುನ್ನಡೆಯಬೇಕಿದೆ ಎಂದರು.


ಜನ ಸಮೂಹ ದುಡ್ಡಿನ ಹಿಂದೆ ಓಡುತ್ತಿದೆ. ಇದುವೇ ಪ್ರಧಾನವಾಗಿದೆ. ಉಳಿದದ್ದು ಗೌಣವಾಗಿದೆ. ಹಣದ ಪ್ರಭಾವದಿಂದ ಅನಾಚಾರ, ಅತ್ಯಾಚಾರ, ಕೊಲೆ-ಸುಲಿಗೆ, ದೌರ್ಜನ್ಯ… ಹೀಗೆ ನಾನಾ ಅಪರಾಧಗಳೂ ವಿಜೃಂಭಿಸುತ್ತಿವೆ. ಇದು ಮರೆಯಾಗಬೇಕು. ಮನುಕುಲ ಮನುಷ್ಯತ್ವ, ನೈತಿಕತೆ, ಪ್ರೀತಿಯ ಕಡೆಗೆ ಮುಖ ಮಾಡಬೇಕಿದೆ. ಈ ರೀತಿ ಪರಿವರ್ತನೆ ಸಂಗೀತ, ಸಾಹಿತ್ಯದಿಂದ ಸಾಧ್ಯ ಇದೆ ಎಂದರು.


ಗಾಯಕರು, ಸಂಯೋಜಕರಾದ ಬಿ.ವಿ.ಪ್ರವೀಣ್ ಮತ್ತು ಬಿ.ವಿ.ಪ್ರದೀಪ್ ಅವರಿಗೆ ‘ಅನಂತಸ್ವಾಮಿ ಗಾನರತ್ನ’ ಪ್ರಶಸ್ತಿ, ತಬಲಾ ವಾದಕ ಆರ್.ರಘುನಾಥ್ ಅವರಿಗೆ ‘ರಾಜು ನಾದರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಖಿಲ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಅಧ್ಯಕ್ಷ ನಾಗರಾಜ್ ವಿ.ಬೈರಿ, ಗಾಯಕ, ಭಾವಸಾಗರ ಟ್ರಸ್ಟ್‌ನ ಸಂಸ್ಥಾಪಕ ರಾಘವೇಂದ್ರ ಬೀಜಾಡಿ, ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್‌ನ ಸಂಸ್ಥಾಪಕ ನಿತಿನ್ ರಾಜಾರಾಮ್ ಶಾಸ್ತ್ರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net