

ಅಂಕೋಲಾ: ತಂಬಾಕು ಸೇವನೆಯಿಂದ ವ್ಯಕ್ತಿಯ ಆರೋಗ್ಯ ಕುಟುಂಬ ಮತ್ತು ಸಾಮಾಜಿಕ ಸ್ವಾಸ್ಥ್ಯ ನಾಶವಾಗುತ್ತದೆ. ಆದ್ದರಿಂದ ತಂಬಾಕು ಮುಕ್ತ ಸಮಾಜ ನಿರ್ವಣದಲ್ಲಿ ವಿದ್ಯಾರ್ಥಿಗಳ ಪ್ರಮುಖ ಪಾತ್ರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಶಿವಕುಮಾರ ಎಸ್. ನಾಯ್ಕ ಹೇಳಿದರು.
ಇಲ್ಲಿನ ಜಿ.ಸಿ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್ಕ್ರಾಸ್, ಎನ್ಸಿಸಿ ಘಟಕದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ತಂಬಾಕು ನಿವಾರಣಾ ಅಭಿಯಾನ ಮತ್ತು ತಂಬಾಕು ನಿಷೇಧ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ತಂಬಾಕು ನಿಯಂತ್ರಣಕೋಶದ ಅಧಿಕಾರಿ ಗೋರೆಸಾಬ್ ನದಾಫ್ ಮಾತನಾಡಿ, ಗುಟ್ಖಾ, ತಂಬಾಕು ಮತ್ತಿತರ ಮಾದಕ ವಸ್ತುಗಳ ಬಳಕೆಯಿಂದ ವ್ಯಸನಿಗಳಾಗುತ್ತಿದ್ದು, ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸ್ವತಃ ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ದೇಶದ ಆಸ್ತಿಯಾಗಿರುವ ಯುವಜನಾಂಗ ಸದೃಢವಾಗಿರುವುದು ಅಗತ್ಯವಿದೆ ಎಂದರು.
ಬಳಿಕ ತಂಬಾಕು ಸೇವನೆಯ ಅಪಾಯಗಳನ್ನು ವಿವರಿಸುವ ಸಾಕ್ಷ್ಯಚಿತ್ರ ಮತ್ತು ಸ್ಥಿತಚಿತ್ರಗಳನ್ನು ಪೊ›ಜೆಕ್ಟರ್ ಮೂಲಕ ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಅಮೃತೇಶ್ವರಿ ಸಂಗಡಿಗರು ಪ್ರಾರ್ಥಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ. ನಂಜುಂಡಯ್ಯ ಸ್ವಾಗತಿಸಿದರು. ಎನ್.ಸಿ.ಸಿ. ಅಧಿಕಾರ ಹರಿಪ್ರಸಾದ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ತಂಬಾಕು ಬಳಕೆಯ ಕೆಡುಕುಗಳ ಕುರಿತು ಜಾಗೃತಿ ಜಾಥಾ ನಡೆಸಿದರು.