

ಮೈಸೂರು: ಧೂಮಪಾನದಿಂದ ಕೇವಲ ಧೂಮಪಾನಿಗಳಿಗೆ ಮಾತ್ರವಲ್ಲ ಧೂಮಪಾನ ಮಾಡದೆ ಇರುವವರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಮೂಲಕ ಮುಟ್ಟಿಸುವ ಕಾರ್ಯ ಪ್ರಾರಂಭಗೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಡಿ.ಜಿ. ನಾಗರಾಜು ನೇತೃತ್ವದಲ್ಲಿ ನಗರದ ವಿವಿಧೆಡೆ ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ)ಯಡಿ ದಾಳಿ ಪ್ರಾರಂಭಿಸಿದ್ದು, ಮೇ 5 ರಿಂದ 13ರವರೆಗೆ ನಡೆದ ದಾಳಿಯಲ್ಲಿ 387 ಪ್ರಕರಣಗಳನ್ನು ದಾಖಲಿಸಿ 43,900 ರೂ. ದಂಡ ವಿಧಿಸಲಾಗಿದೆ.
ಎಲ್ಲಿ ಎಷ್ಟು ದಂಡ ವಸೂಲಿ?: ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 45 ಪ್ರಕರಣಗಳನ್ನು ದಾಖಲಿಸಿ 5,200 ರೂ. ದಂಡ ವಿಧಿಸಲಾಗಿದೆ. ಅದೇ ರೀತಿ ಮಂಡಿ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 65 ಪ್ರಕರಣಗಳಲ್ಲಿ 7700 ರೂ., ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 101 ಪ್ರಕರಣಗಳಲ್ಲಿ 10,100 ರೂ., ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 55 ಪ್ರಕರಣಗಳಲ್ಲಿ 6500 ರೂ., ಜಯಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 48 ಪ್ರಕರಣಗಳಲ್ಲಿ 5,900 ರೂ., ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 73 ಪ್ರಕರಣಗಳಲ್ಲಿ 8,500 ರೂ. ದಂಡ ವಿಧಿಸಲಾಗಿದೆ.
ಕೋಟ್ಪಾ ಜಾಗೃತಿ: ದಾಳಿಯ ಸಂದರ್ಭ ಕೋಟ್ಪಾ ಕಾಯ್ದೆ ಕುರಿತು ವರ್ತಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರಾವನಿಗೆ ಹೊಂದಿರಬೇಕು, ಇಲ್ಲಾವಾದಲ್ಲಿ 5000 ರೂ.ದಂಡವನ್ನು ವಿಧಿಸಲಾಗುವುದು ವರ್ತಕರಿಗೆ ಮಾಹಿತಿ ನೀಡಲಾಯಿತು.
ಕೋಟ್ಪಾ ಸೆಕ್ಷನ್4ರ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಉದ್ಯಾನ, ಹೊಟೇಲ್ ಹಾಗು ರೆಸ್ಟೋರೆಂಟ್, ಬೇಕರಿಗಳು, ಎಲ್ಲ ಅಂಗಡಿ ಮುಂಗಟ್ಟುಗಳು, ಸಿನಿಮಾ ಥಿಯೇಟರ್‌ಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಯ ಆವರಣಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದು, ಇದರ ಉಲ್ಲಂಘನೆಗೆ 200 ರೂ. ವಿಧಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕೋಟ್ಪಾ ಸೆಕ್ಷನ್-4 ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ವರ್ತಕರಿಗೆ ನಿರ್ದೇಶನ ನೀಡಲಾಗಿದೆ.
ಕೋಟ್ಪಾ ಸೆಕ್ಷನ್-5ರ ಪ್ರಕಾರ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಈ ಕೂಡಲೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಯಿತು. ಕೋಟ್ಪಾ ಸೆಕ್ಷನ್-6ಎ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ತಂಬಾಕು ನೀಡುವುದು ನಿಷೇಧಿಸಲಾಗಿದ್ದು, ಉಲ್ಲಂಘಿಸಿದರೆ 200 ರೂ.ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಯಿತು.
ಸೆಕ್ಷನ್-6 ಬಿ ಪ್ರಕಾರ ಎಲ್ಲ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧವಿದ್ದು ಹಾಗೂ ಇದಕ್ಕೆ ಸಂಬಂಧಿಸಿದ ಕೋಟ್ಪಾ ಸೆಕ್ಷನ್ 6 ಬಿ ಯ ಗೋಡೆಬರಹಗಳನ್ನು ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆ ಮಾಲಿಕರು ಬರೆಸಬೇಕು. ಸೆಕ್ಷನ್-7,8 ಹಾಗೂ 9 ರ ಪ್ರಕಾರ ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳ ಬಿಡಿ ಮಾರಾಟ ನಿಷೇಧಿಸಲಾಗಿದೆ. ಬಿಡಿಯಾಗಿ ಮಾರಾಟ ಮಾಡುತ್ತಿರುವ ಬೀಡಿ, ಸಿಗರೇಟು, ಜಗಿಯುವ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲಾಗಿದೆ, ಬಿಡಿಯಾಗಿ ಮಾರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ದಾಳಿಯ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಶಿವಕುಮಾರ್, ಸಾಮಾಜಿಕ ಕಾರ್ಯಕರ್ತ ನವೀದುಲ್ಲಾ ಪರೀಫ್, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರಪಾಲಿಕೆ, ಪೊಲೀಸ್ ಅಧಿಕಾರಿಗಳು ಇದ್ದರು.