ಸ್ವಚ್ಛ ನಗರಿಯ ಉಸಿರುಗಟ್ಟಿಸುತ್ತಿದೆ ಹೊಗೆ…!

Smog is suffocating the clean city...!
Published on

ಸದೇಶ್ ಕಾರ್ಮಾಡ್ ಮೈಸೂರು
ಮೈಸೂರನ್ನು ನಿವೃತ್ತರ ಸ್ವರ್ಗ ಅನ್ನುತ್ತಾರೆ. ಈ ನಿವೃತ್ತರ ಸ್ವರ್ಗದ ಹಲವಾರು ಕಡೆಗಳಲ್ಲಿ ಜನರು ಬೆಳಗ್ಗೆ ಹಾಗೂ ಸಂಜೆ ನೆಮ್ಮದಿಯಾಗಿ ಉಸಿರಾಡುವ ವಾತಾವರಣ ಸಹ ಇಲ್ಲ. ಜನರು ಎಲ್ಲೆಂದರಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದು, ಸುತ್ತಮುತ್ತಲಿನ ವಾತಾವರಣದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡು ಜನರ ಉಸಿರುಗಟ್ಟಿಸುತ್ತಿದೆ.

ನಗರದ ಕೆಲವೊಂದು ಪ್ರದೇಶಗಳಲ್ಲಿ ಪ್ರತಿನಿತ್ಯ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ದಂಡ ವಿಧಿಸಿದರೂ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಪರಿಣಾ ಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ.

ಮರಗಳು ಶಿಶಿರ ಋತುವಿನಲ್ಲಿ ಎಲೆಗಳನ್ನು ಉದುರಿಸಲು ಪ್ರಾರಂಭಿಸಿ ವಸಂತ ಋತುವಿನಲ್ಲಿ (ಮಾರ್ಚ್) ಚಿಗುರಲು ಪ್ರಾರಂಭಿಸುತ್ತವೆ. ಮಾರ್ಚ್‌ವರೆಗೆ ಮರಗಳು ಭಾರಿ ಪ್ರಮಾಣದಲ್ಲಿ ಎಲೆಗಳನ್ನು ಉದುರಿಸುತ್ತವೆ. ಒಂದು ಬಾರಿ ರಸ್ತೆಯನ್ನು ಶುಚಿಗೊಳಿಸಿ ಒಂದು ಗಂಟೆ ಬಿಟ್ಟು ನೋಡಿದರೆ ಅಷ್ಟೇ ಪ್ರಮಾಣದ ಎಲೆಗಳ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ರೀತಿ ಸಂಗ್ರಹವಾಗುತ್ತಿರುವ ಎಲೆಗಳಿಗೆ ಕೆಲವರು ಬೆಂಕಿ ಹಚ್ಚುತ್ತಾರೆ. ಬೆಳಗ್ಗಿನ ಹಾಗೂ ಸಂಜೆ ಎಲ್ಲೆಂದರಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ. ಬೆಂಕಿ ಹಚ್ಚಿದ ಜಾಗದ ಸುತ್ತಮುತ್ತ ಇರುವ ಜನರು ನೆಮ್ಮದಿಯಾಗಿ ಉಸಿರಾಡಲು ಸಹ ಸಾಧ್ಯವಾಗದ ವಾತಾವರಣ ನಿರ್ಮಾಣಗೊಂಡಿದೆ. ಸಾಕಷ್ಟು ಕಡೆಗಳಲ್ಲಿ ಜನರು ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದು, ಕೆಲವು ಕಡೆಗಳಲ್ಲಿ ಪೌರ ಕಾರ್ಮಿಕರೇ ಬೆಂಕಿ ಹಚ್ಚುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಎಲ್ಲೆಂದರಲ್ಲಿ ತ್ಯಾಜ್ಯ ಹರಡುವವರಿಗೆ ನಗರ ಪಾಲಿಕೆ ಅಧಿಕಾರಿಗಳು ಈಗಾಗಲೇ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಅದೇ ರೀತಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರಿಗೆ ದಂಡ ವಿಧಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಬೆಂಕಿ ಹಚ್ಚುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮನೆಗಳ ಆವರಣದಲ್ಲಿ ಬೆಳೆದಿರುವ ಮರಗಳು ಉದುರಿಸುವ ಎಲೆಗಳನ್ನು ಕೆಲವರು ಮನೆಯ ಆವರಣದಲ್ಲಿಯೇ ಒಟ್ಟುಗೂಡಿಸಿ ಬೆಂಕಿ ಹಚ್ಚುತ್ತಿದ್ದು, ಇನ್ನು ಕೆಲವರು ರಸ್ತೆಗೆ ತಂದು ಬೆಂಕಿ ಹಚ್ಚುತ್ತಿದ್ದಾರೆ.

ಜಾಗೃತಿ ಮೂಡಿಸಿದರೂ ಬದಲಾಗಿಲ್ಲ:

ಸ್ವಚ್ಛತೆ ಕುರಿತು ನಗರ ಪಾಲಿಕೆ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದೆ. ಇಷ್ಟಾದರೂ ಸಾಕಷ್ಟು ಜನರು ನಮ್ಮ ನಗರವನ್ನು ನಾವು ಸ್ವಚ್ಛವಾಗಿಡಬೇಕು ಎಂಬ ಅರಿವು ಬಂದಂತೆ ಇಲ್ಲ. ಮೈಸೂರು ಸ್ವಚ್ಛತೆಯಲ್ಲಿ ಪ್ರತಿ ಬಾರಿ ರಾಷ್ಟ್ರದಲ್ಲಿ ಒಂದಲ್ಲಾ ಒಂದು ಪ್ರಶಸ್ತಿಗಳನ್ನು ಪಡೆಯುತ್ತಾ ಬರುತ್ತಿದೆ. 2015 ಮತ್ತು 2016 ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದುಕೊಂ ಡಿತು. ಆ ನಂತರದ ವರ್ಷಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳು ನಡೆದಿವೆ. ಆದರೆ, ಇಷ್ಟೆಲ್ಲ ಆದರೂ ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ಸಂಖ್ಯೆಯೇನು ಕಡಿಮೆ ಇಲ್ಲ. ನಗರದಲ್ಲಿ 75 ಬ್ಲಾಕ್ಸ್ ಸ್ಪಾಟ್‌ಗಳು ಇರುವುದೇ ಇದಕ್ಕೆ ಸಾಕ್ಷಿ. ಈ ಬ್ಲಾಕ್ ಸ್ಪಾಟ್‌ಗಳಲ್ಲಿ ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದರೂ ಸಹ ಜನರು ತ್ಯಾಜ್ಯ ಎಸೆಯುವುದನ್ನು ನಿಲ್ಲಿಸುತ್ತಿಲ್ಲ. ಈ ರೀತಿ ಎಸೆದ ತ್ಯಾಜ್ಯಕ್ಕೆ ಜನರು ಬೆಂಕಿಯನ್ನು ಸಹ ಹಚ್ಚುತ್ತಿದ್ದಾರೆ.

ತ್ಯಾಜ್ಯಕ್ಕೆ ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಕಡೆಗಳಲ್ಲಿ ಬೆಂಕಿ ಹಚ್ಚಲಾಗುತ್ತದೆ. ಇದೇ ಸಮಯದಲ್ಲಿ ಜನರು ವಾಯು ವಿಹಾರಕ್ಕೆ ತೆರಳುತ್ತಾರೆ. ಜನರು ಉತ್ತಮ ಗಾಳಿ ಸೇವನೆ ಮಾಡುವ ಬದಲು ಹೊಗೆಯನ್ನು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ಈ ರೀತಿ ಹೊಗೆ ಯನ್ನು ಸೇವಿಸುತ್ತಾ ಹೋದರೆ ಜನರ ಆರೋಗ್ಯವೂ ಹದಗೆಡುತ್ತದೆ. ವಿಶೇಷವಾಗಿ ಕಾಯಿಲೆಯಿಂದ ಬಳಲುತ್ತಿರುವವರು, ಅಸ್ತಮ ರೋಗಿಗಳು ಈ ಹೊಗೆಯ ವಾತಾವರಣದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.

ನಗರದ ಹಲವಾರು ಕಡೆಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಗಮನಿಸಿದ್ದೇನೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ವಾತಾವರಣವನ್ನು ಕಲುಷಿತಗೊಳಿಸಬಾರದು ಎಂದು ಪೌರ ಕಾರ್ಮಿಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸಹ ಮಾಡಲಾಗುವುದು. ಸದ್ಯದಲ್ಲಿಯೇ ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಲಾಗುವುದು. ಪಾಲಿಕೆಯ ಮನವಿಗೆ ಸ್ಪಂದಿಸದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
ಡಾ. ವೆಂಕಟೇಶ್,
ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net