ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ರಾಜ್ಯಮಟ್ಟದ ಸಭೆ

IMG-20240816-WA0012.jpg
Published on

ಬೆಳಗಾವಿ:ಪಂಚಮಸಾಲಿ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಸಪ್ಟೆಂಬರ್ 15ರಂದು ಉತ್ತರ ಕರ್ನಾಟಕ ಲಿಂಗಾಯತ ಪಂಚಮಸಾಲಿ ವಕೀಲರ ಮಹಾಪರಿಷತ್ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಲಿಂಗಾಯತ ಪಂಚಮಸಾಲಿ ವಕೀಲರ ಮಹಾಪರಿಷತ್ ಜಿಲ್ಲಾ ಮಟ್ಟದ ಪ್ರಥಮ ಸಭೆಯ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಲುವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ, ಇಲ್ಲಿಯವರೆಗೆ ಚುಳುವಳಿಗೆ ಯಶಸ್ವಿ ಸಿಕ್ಕಿಲ್ಲ. ಅಧಿವೇಶನದಲ್ಲಿ ಮೀಸಲಾತಿ ವಿಷಯ ಪ್ರಸ್ತಾಪಿಸುವಂತೆ ನಮ್ಮ ಸಮಾಜದ ಶಾಸಕರ ಮನೆ ಮನೆಗೆ ತೆರಳಿ ವಿನಂತಿಸಲಾಗಿತ್ತು. ಆದರೆ, ಯಾವುದೇ ಶಾಸಕರು ಧ್ವನಿ ಎತ್ತದಿರುವುದು ಸಮಾಜದಲ್ಲಿ ಬೇಸರ ಉಂಟು ಮಾಡಿದೆ ಎಂದರು. ಲಿಂಗಾಯತ ಪಂಚಮಸಾಲಿ ವಕೀಲರ ಮಹಾಪರಿಷತ್ ಮೂಲಕ ಉತ್ತರ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿರುವ ಸಮಾಜದ ವಕೀಲರನ್ನು ಒಟ್ಟುಗೂಡಿಸುವುದು, ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಅಲ್ಲದೆ, ಜಿಲ್ಲಾ ಮಟ್ಟದಲ್ಲಿ ಸಮಾಜದ ವಕೀಲ ಸಭೆ ಮಾಡಲಾಗುವುದು. ಮೀಸಲಾತಿಗಾಗಿ ನ್ಯಾಯಾಲಯಗಳಲ್ಲಿ ಯಾವ ರೀತಿಯ ಹೋರಾಟ ನಡೆಸಬೇಕು. ಸರ್ಕಾರಗಳ ಮೇಲೆ ಒತ್ತಡ ಹಾಕುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು. ಈಗಾಗಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಲುವಾಗಿ ರಾಜ್ಯಮಟ್ಟದ ಬೃಹತ್ ಹೋರಾಟ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಸೆ.15ರಂದು ಬೆಳಗಾವಿಯಲ್ಲಿ ನಡೆಯುವ ಲಿಂಗಾಯತ ಪಂಚಮಸಾಲಿ ವಕೀಲರ ಮಹಾಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಅಲ್ಲದೆ, ಉಗ್ರ ಹೋರಾಟ ನಡೆಸಲು ಸಮಾಜದ ನಾಯಕರು ಸಹ ಒತ್ತಡ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರದ ಬಳಿಕ ಮತ್ತೊಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net