ಸ್ಮೈಲಿಂಗ್ ಫಿಶ್ ಕೊಟ್ಟಮುಡಿ ತಂಡ ಚಾಂಪಿಯನ್

21adarshkdga5
Published on

ಮಡಿಕೇರಿ: ಕರ್ನಾಟಕ ರಾಜ್ಯ ಅಡಕ್ ವಾಲಿಬಾಲ್ ಅಸೋಸಿಯೇಷನ್, ಕೊಡಗು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಹಾಗೂ ಎಚ್.ಡಿ.ದೇವೇಗೌಡ ಅಭಿಮಾನಿಗಳ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಲೀಗ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯದಲ್ಲಿ ಸ್ಮೈಲಿಂಗ್ ಫಿಶ್ ಕೊಟ್ಟಮುಡಿ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


ಮಧ್ಯರಾತ್ರಿಯ ಇರುಳಿನಲ್ಲಿ ಪ್ರಕಾಶಯುತ ಹೊನಲು ಬೆಳಕಿನಾಶ್ರಯದಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ವಾಲಿಬಾಲ್‌ನ ಘಟಾನುಘಟಿ ಕ್ರೀಡಾಪಟುಗಳು ಸ್ಮ್ಯಾಶ್ ಮೇಲೆ ಸ್ಮ್ಯಾಶ್ ಬಾರಿಸುವ ಮೂಲಕ ಬಿರುಸಿನ ವಾಲಿಬಾಲ್ ಪ್ರದರ್ಶನ ನೀಡಿ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳ ಮನರಂಜಿಸಿದರು.


ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನಗಳಿಸಿ ಆಕರ್ಷಕ ಟ್ರೋಫಿ ಹಾಗೂ ರೂ.೫೦ ಸಾವಿರ ನಗದನ್ನು ತನ್ನದಾಗಿಸಿಕೊಂಡಿತು. ಪುದುಚೇರಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆದು ರೂ.೧೫ ಸಾವಿರ ನಗದನ್ನು ತನ್ನದಾಗಿಸಿಕೊಂಡಿತು.


ಪುರುಷರ ಪಂದ್ಯಾಟದಲ್ಲಿ ಸ್ಮೈಲಿಂಗ್ ಫಿಶ್ ಕೊಟ್ಟಮುಡಿ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಹಾಗೂ ರೂ.೭೫ ಸಾವಿರ ನಗದನ್ನು ತನ್ನದಾಗಿಸಿಕೊಂಡಿತು. ಭಾರತೀಯ ಸೇನಾ ವಾಲಿಬಾಲ್ ತಂಡದ ಆಟಗಾರರು ಹಾಗೂ ಹೆಸರಾಂತ ಪ್ರೊ.ವಾಲಿಬಾಲ್ ಲೀಗ್‌ನ ಆಟಗಾರರು ತಂಡದ ಪರ ಆಡಿದ್ದು ವಿಶೇಷವಾಗಿತ್ತು. ದ್ವಿತೀಯ ಸ್ಥಾನವನ್ನು ವೆಸ್ಟರ್ನ್ ಮಡಿಕೇರಿ ತಂಡ ಪಡೆದು ರೂ.೫೦ ಸಾವಿರ ನಗದನ್ನು ತನ್ನದಾಗಿಸಿಕೊಂಡಿತು.


ಸಭಾ ಕಾರ್ಯಕ್ರಮ: ಈ ಸಂದರ್ಭ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಎಚ್.ಡಿ ದೇವೇಗೌಡರ ಅಭಿಮಾನಿಗಳ ಬಳಗ ಪ್ರಥಮ ಬಾರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದೆ. ಎಲೆಮರೆಯ ಕಾಯಿಯಂತಿರುವ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಕ್ರೀಡಾಭಿಮಾನಗಳಿಗೂ ವಾಲಿಬಾಲ್ ರಸದೌತನ ನೀಡಿದೆ. ಸಹಸ್ರ ಸಂಖ್ಯೆಯಲ್ಲಿ ಆಗಮಿಸಿರುವ ಕ್ರೀಡಾಭಿಮಾನಿಗಳಿಗೆ ಮುಂದಿನ ದಿನಗಳಲ್ಲಿ ಹೊನಲು ಬೆಳಕಿನ ಕಬಡ್ಡಿಯೂ ಆಯೋಜನೆ ಮಾಡುವುದಾಗಿ ನುಡಿದರು.


ಹಿರಿಯ ಪತ್ರಕರ್ತ ಜಿ.ರಾಜೇಂದ್ರರವರು ಮಾತನಾಡಿ, ರಾತ್ರಿಯಾಗಿದ್ದರೂ ಕೂಡ ಹೊನಲು ಬೆಳಕಿನಿಂದ ಕೂಡಿರುವ ವಾತಾವರಣ ಹಗಲಿನ ಅನುಭವ ನೀಡುತ್ತಿದೆ. ಕ್ರೀಡಾಕೂಟ ಆಯೋಜನೆಯಿಂದಾಗಿ ಎಲ್ಲರೂ ಪ್ರೀತಿ ವಿಶ್ವಾಸದಲ್ಲಿ ಒಟ್ಟಿಗೆ ಸೇರುವ ಅವಕಾಶ ಸಿಗುವಂತಾಗುತ್ತದೆ. ಜಯ-ಅಪಜಯ ಮರೆತು ಎಲ್ಲರೂ ಸಂತೋಷದಲ್ಲಿ ಬೆರೆಯುವಂತಾಗಲಿ ಎಂದರು.


ನಗರಸಭೆ ಮಾಜಿ ಪೌರಾಯುಕ್ತೆ ಪುಷ್ಪಾವತಿ, ಜೆ.ಡಿ.ಎಸ್ ಪ್ರಮುಖ ಇಸಾಕ್ ಖಾನ್‌ರವರು ಶುಭ ಹಾರೈಸಿದರು.


ವೇದಿಕೆಯಲ್ಲಿ ಬೆಳೆಗಾರ ಬೇಕಲ್ ದೇವ್‌ರಾಜ್, ಎಚ್.ಡಿ.ಡಿ ಅಭಿಮಾನಿಗಳ ಬಳಗದ ಅಧ್ಯಕ್ಷ ಸುನಿಲ್, ಬಳಗದ ಗೌತಮ್, ಮಡಿಕೇರಿ ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸೋಮವಾರಪೇಟೆ ಜೆ.ಡಿ.ಎಸ್ ಅಧ್ಯಕ್ಷ ನಾಗರಾಜ್, ಕ್ರೀಡಾ ಸಮಿತಿಯ ಪ್ರಮುಖ ರಾಜೀವ್ ಮನೋಹರ್, ನಿವೃತ್ತ ಪ್ರಾಂಶುಪಾಲೆ ಗುಲಾಬಿ ಜನಾರ್ಧನ್ ಹಾಗೂ ಇತರರು ಇದ್ದರು. ಮಡಿಕೇರಿಯ ವಿಕ್ರಂ ಜಾದೂಗರ್ ಅವರಿಂದ ಪಂದ್ಯಾಟಗಳ ನಡುವೆ ಜಾದೂ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net