ಹಂಜಗಿಯಲ್ಲಿ ಹಗರಣದ ವಾಸನೆ, ಗಣಕಯಂತ್ರ ಸಾಮಗ್ರಿ ಗುಳುಂ, ಕೆಆರ್‌ಎಸ್ ಪಕ್ಷದಿಂದ ತನಿಖೆಗೆ ಆಗ್ರಹ

KRS HANJAGI CASE
ವಿಜಯಪುರ ಜಿಲ್ಲಾಡಳಿತಕ್ಕೆ ರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಇಂಡಿ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಗಣಪತಿ ಲಾಲಸಿಂಗ್ ರಾಠೋಡ, ವಿಕ್ರಮ ವಾಗಮೊರೆ, ಅಣ್ಣಾ ಪೂಜಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಗ್ರಾಮ ಪಂಚಾಯಿತಿಯಿಂದ ಗ್ರಂಥಾಲಯಕ್ಕೆ ಪೂರೈಸಿದ ಎರಡು ಕಂಪ್ಯೂಟರ್‌ಗಳು, ಯುಪಿಎಸ್ ಹಾಗೂ ಸಿಪಿಯು ಸೇರಿದಂತೆ ಮತ್ತಿತರ 9 ಸಾಮಗ್ರಿಗಳನ್ನು ಎತ್ತಿ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಇಂಡಿ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿಯಡಿ ನಡೆಯುತ್ತಿರುವ ಗ್ರಂಥಾಲಯಕ್ಕೆ ಸರ್ಕಾರದಿಂದ 2022ರಲ್ಲಿ 2 ಕಂಪ್ಯೂಟರ್‌ಗಳು, 2 ಯುಪಿಎಸ್, 2 ಸಿಪಿಯು ಮತ್ತು ಅವುಗಳಿಗೆ ಸಂಬಂಧಿಸಿದ ಒಟ್ಟು 9 ಸಾಮಗ್ರಿಗಳು ಮಂಜೂರಾಗಿವೆ. ಪಿಡಿಒ ಹೆಸರಿನಲ್ಲಿ ಬಂದಿರುವ ಈ ಸಲಕರಣೆಗಳ ಉಪಲಬ್ಧತೆಯ ಬಗ್ಗೆ ಗ್ರಂಥಾಲಯದ ಸಂಚಾಲಕ ಎಸ್.ಆರ್. ಭಜಂತ್ರಿ ಇವರನ್ನು ವಿಚಾರಿಸಲಾಗಿ ಅವರು ನಮಗೆ ಮೌಖಿಕವಾಗಿ ಕೊಟ್ಟ ವರದಿ ಪ್ರಕಾರ ತಾನು ಈಗಾಗಲೇ ಸರ್ಕಾರದಿಂದ ಬಂದ ಕಂಪ್ಯೂಟರ್‌ಗಳ ಒಟ್ಟು 9 ಸಾಮಗ್ರಿಗಳನ್ನು ಗ್ರಂಥಾಲಯಕ್ಕೆ ಪೂರೈಸಲು ಅನೇಕ ಬಾರಿ ಪಿಡಿಒಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸುತ್ತಾರಲ್ಲದೇ ಅರ್ಜಿಗಳ ಝರಾಕ್ಸ್ ಪ್ರತಿಗಳನ್ನು ಸಹ ನೀಡಿದ್ದಾರೆ. ಆದರೆ, ಪಿಡಿಒ ಮಹೇಶ ರಾಠೋಡ ಇವರಿಗೆ ವಿಚಾರಿಸಿದರೆ ಗ್ರಾಮ ಪಂಚಾಯಿತಿಯಲ್ಲಾಗಲಿ ಅಥವಾ ಗ್ರಂಥಾಲಯದಲ್ಲಿಯಾಗಲಿ ಯಾವುದೇ ಸಾಮಗ್ರಿಗಳು ಇರುವುದಿಲ್ಲ ಎನ್ನುತ್ತಾರೆ. ಹೀಗಾಗಿ ಮಂಜೂರಾದ ಕಂಪ್ಯೂಟರ್ ಮತ್ತು ಸಾಮಗ್ರಿಗಳು ಎಲ್ಲಿ ಹೋದವು? ಎಂಬ ಯಕ್ಷ ಪ್ರಶ್ನೆ ಎದುರಾಗಿದೆ ಎಂದರು. ಈಗಾಗಲೇ ಈ ಬಗ್ಗೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನ. 11 ರಂದು ದೂರು ಸಹ ನೀಡಲಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಗಣಪತಿ ಲಾಲಸಿಂಗ್ ರಾಠೋಡ, ವಿಕ್ರಮ ವಾಗಮೊರೆ, ಅಣ್ಣಾ ಪೂಜಾರಿ, ಲಕ್ಷ್ಮಣ ಚಡಚಣ, ಚಂದ್ರಕಾಂತ ನಗರೆ, ನಾಗೇಶ ಸರಸಂಬಿ, ರವಿ ವಾಗಮೋರೆ, ಕಾಂತು ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net