

ಗಂಗಾವತಿ: ತಾಲೂಕಿನ ಮರಳಿಯ ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಎಂ.ಬಿ.ಎಸ್ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತು ಉಪನ್ಯಾಸಕರು ಶುಕ್ರವಾರ ವಿಜಯವಾಣಿ ಪತ್ರಿಕಾ ಕಚೇರಿಗೆ ಭೇಟಿ ನೀಡಿ, ಪತ್ರಿಕೋದ್ಯಮ ಮತ್ತು ಮಾಧ್ಯಮದ ಕಾರ್ಯವೈಖರಿ ಕುರಿತು ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು. ಇದು ಅವರ ಪಠ್ಯಕ್ರಮಕ್ಕೆ ಪೂರಕವಾದ ಒಂದು ಶೈಕ್ಷಣಿಕ ಪ್ರವಾಸವಾಗಿದ್ದು, ವಿದ್ಯಾರ್ಥಿಗಳಲ್ಲಿ ಪತ್ರಿಕೋದ್ಯಮದ ಕುರಿತ ಕುತೂಹಲಕ್ಕೆ ವೇದಿಕೆಯಾಯಿತು.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹೇಗೆ ತಯಾರಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿದ್ಯಾರ್ಥಿಗಳು ಉತ್ಸಾಹದಿಂದ ಕಚೇರಿಗೆ ಆಗಮಿಸಿದ್ದರು. ಅವರು ಮೊದಲು ಸಂಪಾದಕೀಯ ವಿಭಾಗಕ್ಕೆ ಭೇಟಿ ನೀಡಿ, ಸುದ್ದಿಗಳು ಹೇಗೆ ಸಂಗ್ರಹವಾಗುತ್ತವೆ, ಅವುಗಳನ್ನು ಹೇಗೆ ಪರಿಶೀಲಿಸಿ, ಸಂಪಾದಿಸಲಾಗುತ್ತದೆ ಮತ್ತು ಪತ್ರಿಕೆಯಲ್ಲಿ ಪ್ರಕಟಿಸಲು ಸಿದ್ಧಪಡಿಸಲಾಗುತ್ತದೆ ಎಂಬುದನ್ನು ತಿಳಿದುಕೊಂಡರು. ಪತ್ರಿಕೆಯ ವಿಶ್ವಾಸಾರ್ಹತೆ ಕಾಪಾಡುವ ಜವಾಬ್ದಾರಿ, ಸುಳ್ಳು ಸುದ್ದಿಗಳ ಸವಾಲುಗಳು ಮತ್ತು ಪತ್ರಿಕೆಯ ಮೇಲೆ ಜಾಹೀರಾತುಗಳ ಪಾತ್ರದ ಬಗ್ಗೆಯೂ ಪತ್ರಿಕಾ ಕಚೇರಿಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಸುದ್ದಿಯನ್ನು ಸಂಗ್ರಹಿಸುವ ವಿಧಾನ, ಛಾಯಾಚಿತ್ರಗಳ ಗುಣಮಟ್ಟ, ಅವುಗಳನ್ನು ಸಂಪಾದಿಸುವುದು ಮತ್ತು ಪುಟ ವಿನ್ಯಾಸ ಮಾಡುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕವಾಗಿ ವಿವರಿಸಲಾಯಿತು.
ನಂತರ ವಿದ್ಯಾರ್ಥಿಗಳು ಪತ್ರಿಕೆಯ ಅತ್ಯಾಧುನಿಕ ಮುದ್ರಣ ವಿಭಾಗಕ್ಕೆ ತೆರಳಿದರು. ಡಿಜಿಟಲ್ ರೂಪದಲ್ಲಿರುವ ಪುಟಗಳು ಸಿಟಿಪಿ ಯಂತ್ರದ ಮೂಲಕ ಅಲ್ಯೂಮಿನಿಯಂ ಪ್ಲೇಟ್‌ಗಳಾಗಿ ಹೇಗೆ ಪರಿವರ್ತನೆಯಾಗುತ್ತವೆ ಎಂಬುದನ್ನು ಅವರು ಆಸಕ್ತಿಯಿಂದ ವೀಕ್ಷಿಸಿದರು. ನಂತರ ಈ ಪ್ಲೇಟ್‌ಗಳನ್ನು ಮುದ್ರಣ ಯಂತ್ರಗಳಿಗೆ ಅಳವಡಿಸಿ, ಪತ್ರಿಕೆಗಳು ವೇಗವಾಗಿ ಮುದ್ರಣಗೊಳ್ಳುವ ಪ್ರಕ್ರಿಯೆಯನ್ನು ಕಣ್ತುಂಬಿಕೊಂಡರು. ಪ್ರತಿದಿನ ತಮ್ಮ ಮನೆಗೆ ತಲುಪುವ ಪತ್ರಿಕೆ ಎಷ್ಟು ಶ್ರಮ ಮತ್ತು ತಂತ್ರಜ್ಞಾನದ ಬಳಕೆಯ ನಂತರ ಸಿದ್ಧವಾಗುತ್ತದೆ ಎಂದು ತಿಳಿದು ವಿದ್ಯಾರ್ಥಿಗಳು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದರು.
ಈ ಭೇಟಿಯ ಸಂದರ್ಭದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆ ಮತ್ತು ಅದರ ಸಂಸ್ಥಾಪಕರಾದ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರ ಪರಿಶ್ರಮದ ಬಗ್ಗೆ ಕೇಳಿ ತಿಳಿದುಕೊಂಡರು. ಸಣ್ಣ ಮಟ್ಟದಿಂದ ಆರಂಭವಾಗಿ ಇಡೀ ದೇಶದಲ್ಲೇ ಗುರುತಿಸಿಕೊಂಡಿರುವ ಸಂಸ್ಥೆಯ ಯಶಸ್ಸಿಗೆ ಕಾರಣಗಳನ್ನು ತಿಳಿದು ವಿದ್ಯಾರ್ಥಿಗಳು ಪ್ರೇರೇಪಿತರಾದರು. ವಿಆರ್ಎಲ್ ಸಂಸ್ಥೆಯು ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ನಿತ್ಯವೂ ಪತ್ರಿಕೆ ಓದುತ್ತಿದ್ದೆವು. ಮುದ್ರಣದ ರೀತಿಯ ಬಗ್ಗೆ ಮಾಹಿತಿಯಿರಲಿಲ್ಲ. ಪತ್ರಿಕಾ ಕಚೇರಿಗೆ ಭೇಟಿ ನೀಡಿದ ನಂತರವೇ ಸಿಬ್ಬಂದಿಯ ಶ್ರಮ ಎಷ್ಟಿದೆ ಎಂಬುದು ಇಲ್ಲಿ ಬಂದ ಮೇಲೆ ತಿಳಿದಿದೆ. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ಈಶಮ್ಮ, ಪ್ರಶಿಕ್ಷಣಾರ್ಥಿ
ಪತ್ರಿಕೆ ಮತ್ತು ಪತ್ರಿಕೆ ಓದುವುದರ ಬಗ್ಗೆ ಗೊತ್ತಿದ್ದರೂ ಯಾವ ರೀತಿಯಲ್ಲಿ ಮುದ್ರಣವಾಗುತ್ತದೆ ಅನ್ನೋದು ತಿಳಿದಿರಲಿಲ್ಲ. ವಿಷಯ ಹುಡುಕುವ ರೀತಿ, ಸುದ್ದಿರೂಪದಲ್ಲಿ ಕೊಡುವುದು, ಮುದ್ರಣದ ತಾಂತ್ರಿಕತೆ ಮತ್ತು ಜಾಹೀರಾತು ಬಗ್ಗೆ ಗೊತ್ತಾಗಿದೆ.
ಅಭಿಷೇಕ, ಪ್ರಶಿಕ್ಷಣಾರ್ಥಿ
ಆಧುನಿಕ ತಂತ್ರಜ್ಞಾನಗಳ ನಡುವೆಯೂ ಮುದ್ರಣ ಮಾಧ್ಯಮ ತನ್ನ ಮೌಲ್ಯ ಹೆಚ್ಚಿಸಿಕೊಂಡಿದ್ದು, ನಿತ್ಯವೂ ಪತ್ರಿಕೆ ಓದಿದಾಗಲೇ ಸಮಾಧಾನ. ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿರುವ ವಿಆರ್ಎಲ್ ಸಮೂಹ ಸಂಸ್ಥೆಯ ಕಾರ್ಯ ಪ್ರಶಂಸನೀಯ. ಪತ್ರಿಕೆ ಒಂದು ಸವಾಲಿನ ಕ್ಷೇತ್ರವಾಗಿದ್ದು, ಸಿಬ್ಬಂದಿ ಶ್ರಮ ಅಪಾರ.
ಎಚ್.ಎಂ. ವಿರೂಪಾಕ್ಷಯ್ಯಸ್ವಾಮಿ, ನಿರ್ದೇಶಕ, ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಸಂಸ್ಥೆ
ಪತ್ರಿಕೆಗೆ ವಿಷಯಗಳನ್ನು ಹುಡುಕುವ ರೀತಿ ಬಗ್ಗೆ ಕಚೇರಿಗೆ ಭೇಟಿ ನೀಡಿದಾಗ ಗೊತ್ತಾಗಿದೆ. ಬೆಳಗ್ಗೆ ಪತ್ರಿಕೆ ಓದಿ ನಂತರ ಮರೆತು ಬಿಡುತ್ತೇವೆ. ಆದರೆ, ಪತ್ರಿಕೆ ತಯಾರಾಗಬೇಕಾದರೆ ಎಷ್ಟು ಶ್ರಮ ಇದೆ ಅನ್ನೋದು ಗೊತ್ತಾಗಿದೆ. ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಸುಮಂಗಲಾ, ಉಪನ್ಯಾಸಕಿ, ಬಿಎಡ್ ಕಾಲೇಜು.
ಓದುವ ಹವ್ಯಾಸ ಬೆಳೆಸುವುದರ ಜತೆಗೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿರುವ ವಿಆರ್‌ಎಲ್ ಮುಖ್ಯಸ್ಥರ ಕಾರ್ಯ ಶ್ಲಾಘನೀಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುದ್ರಣ ವಿಭಾಗ ಆರಂಭಿಸುವುದರ ಜತೆಗೆ ಓದುಗ ಪಡೆಯನ್ನೇ ಕಟ್ಟಿದ್ದಾರೆ. ಮುದ್ರಣ ವಿಭಾಗದ ಪ್ರತಿ ಮಾಹಿತಿ ನೀಡಿದ ತಂಡಕ್ಕೆ ಧನ್ಯವಾದಗಳು.
ಎಚ್.ಎಂ.ಬಸವರಾಜಸ್ವಾಮಿ, ಆಡಳಿತಾಧಿಕಾರಿ, ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಸಂಸ್ಥೆ