

ತುಮಕೂರು: ಬೆಂಗಳೂರು ಉಪನಗರವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಲಕ್ಷಾಂತರ ಎಕರೆ ಭೂಮಿಯನ್ನು ಕರೆದು ಕೊಡುತ್ತಿರುವ ಜಿಲ್ಲಾಡಳಿತಕ್ಕೆ ಗ್ರಾಮೀಣ ಭಾಗದಲ್ಲಿ ಅತೀ ಅಗತ್ಯವಾದ ಸ್ಮಶಾನಗಳಿಗೆ ಭೂಮಿ ನೀಡಲು ಸಾಧ್ಯವಾಗಿಲ್ಲ.
26 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ 330 ಗ್ರಾಪಂನಲ್ಲಿ 2743 ಗ್ರಾಮಗಳಿದ್ದರೂ 1453 ಗ್ರಾಮಗಳಲ್ಲಿ ಇಂದಿಗೂ ಸಾರ್ವಜನಿಕ ಸ್ಮಶಾನಗಳಿಲ್ಲ, ಸ್ವಂತ ಭೂಮಿ ಹೊಂದಿರುವವರು ತಮ್ಮ ಭೂಮಿಯಲ್ಲಿಯೇ ಅಂತ್ಯ ಸಂಸ್ಕಾರ ಪೂರೈಸುತ್ತಾರೆ. ತುಂಡು ಭೂಮಿಯೂ ಇಲ್ಲದ ಲಕ್ಷಾಂತರ ಜನರು ಅಂತ್ಯಸಂಸ್ಕಾರಕ್ಕೆ ಪರದಾಡುವ ಸ್ಥಿತಿಯಿದೆ.
ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕಿನ 207 ಗ್ರಾಮಗಳಲ್ಲಿ ಕೇವಲ 47 ಗ್ರಾಮಗಳು ಸಾರ್ವಜನಿಕ ಸ್ಮಶಾನ ಹೊಂದಿದೆ. ಇನ್ನೂ 160 ಗ್ರಾಮಗಳಲ್ಲಿ ಜನರು ಸರ್ಕಾರಿ ಗೋಮಾಳ, ಕೆರೆ ಅಂಗಳಲ್ಲಿ ಸಾರ್ವಜನಿಕರ ವಿರೋಧ ಕಟ್ಟಿಕೊಂಡು ಸತ್ತವರಿಗೆ ಮುಕ್ತಿಕೊಡುವ ದುಸ್ಥಿತಿ ಒದಗಿ ಬಂದಿದೆ.
ತುಮಕೂರು ತಾಲೂಕಿನ 380 ಗ್ರಾಮಗಳಲ್ಲಿ ಕೇವಲ 59ರಲ್ಲಿ ಮಾತ್ರ ಸ್ಮಶಾನವಿದೆ, ಜಿಲ್ಲೆಯ 2743 ಗ್ರಾಮಗಳಲ್ಲಿ 1290 ಗ್ರಾಮಗಳಲ್ಲಿ ಯಾವುದೇ ರೀತಿಯ ಸ್ಮಶಾನವಾಗಲಿ ಅಥವಾ ಸ್ಮಶಾನಕ್ಕೆ ಗುರುತಿಸಿದ ಜಾಗವೇ ಇಲ್ಲ. ಸ್ಥಳೀಯ ಪಂಚಾಯಿತಿಗಳು ಜಾಗ ಗುರುತಿಸಬೇಕು ಎಂಬ ಸೂಚನೆ ಎಲ್ಲ ಸಭೆಯಲ್ಲಿಯೂ ನೀಡಲಾಗುತ್ತಿದೆ, ಅಧಿಕಾರಿಗಳು ಇದಕ್ಕೆ ತಲೆಕೆಡಿಸಿಕೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ.
ಶಿರಾ, ಕೊರಟಗೆರೆಯಲ್ಲಿ ಸಾಧನೆ: ದಲಿತ ಕುಟುಂಬಗಳು ಹೆಚ್ಚಾಗಿರುವ ಕೊರಟಗೆರೆ ಹಾಗೂ ಶಿರಾ ತಾಲೂಕುಗಳಲ್ಲಿ ಸ್ಮಶಾನಕ್ಕೆ ಭೂಮಿ ಗುರುತಿಸುವಲ್ಲಿ ಜಿಪಂ ತಕ್ಕಮಟ್ಟಿನ ಸಾಧನೆ ಮಾಡಿದೆ. ಈ ಹಿಂದೆ ಸಚಿವರಿದ್ದ ಕಾರಣಕ್ಕೆ ಈ ಎರಡೂ ತಾಲೂಕುಗಳಲ್ಲಿ ಭೂಮಿ ಗುರುತಿಸಿ ಸ್ಮಶಾನಕ್ಕೆ ನೀಡಲಾಗಿದೆ. ಕೊರಟಗೆರೆ ತಾಲೂಕಿನ 256 ಗ್ರಾಮಗಳ ಪೈಕಿ 234 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವಿದೆ, ಶಿರಾದಲ್ಲಿ 246 ಗ್ರಾಮಗಳ ಪೈಕಿ 216 ಗ್ರಾಮಗಳಲ್ಲಿ ಭೂಮಿ ಮೀಸಲಿಡಲಾಗಿದೆ. ಜಾಗ ಗುರುತಿಸಿರುವ ಭೂಮಿಯಲ್ಲಿ ಸರ್ಕಾರದ ಅನುದಾನದಲ್ಲಿ ಸ್ಮಶಾನಗಳ ಅಭಿವೃದ್ಧಿ ಮಾಡಿಕೊಂಡು ಜನರು ಅಗತ್ಯವಿದ್ದಾಗ ಬಳಸಲು ಅವಕಾಶ ಮಾಡಿಕೊಡುವ ಜವಾಬ್ಧಾರಿ ಜವಪ್ರತಿನಿಧಿಗಳ ಮೇಲಿದೆ.
ಪ್ರಸ್ತುತ ಇರುವ ಸ್ಮಶಾನಗಳನ್ನು ಜಾತಿಗೆ ಸೀಮಿತವಾಗಿಸದೇ ಸಾರ್ವಜನಿಕರಿಗೆಲ್ಲ ಅವಕಾಶ ನೀಡಲಾಗಿದೆ, ಎಲ್ಲೆಡೆಯೂ ಸ್ಮಶಾನಕ್ಕೆ ಜಾಗ ಗುರುತಿಸುವ ಕಾರ್ಯ ಆಯಾ ಗ್ರಾಪಂ ಹಂತದಲ್ಲಿ ನಡೆಯುತ್ತಿದ್ದು ಶೀಘ್ರದಲ್ಲಿ ಎಲ್ಲೆಡೆಯೂ ಸ್ಮಶಾನ ಸ್ಥಾಪಿಸಲಾಗುವುದು. ರಮೇಶ್ ಜಿಪಂ, ಉಪಕಾರ್ಯದರ್ಶಿ