ಸ್ಮಾರ್ಟ್‌ಸಿಟಿ ಕಾಮಗಾರಿ ತ್ವರಿತಗತಿಗೆ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲನೆ

mng-oct14-smartcity3
Published on

ಮಂಗಳೂರು: ಸ್ಮಾರ್ಟ್‌ಸಿಟಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಪ್ರತಿ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಗೆ ಅಡ್ಡಿಯಾಗಿರುವ ಇಲಾಖೆಗಳ ಸಭೆ ಕರೆದು ಸಮಸ್ಯೆ ನಿವಾರಿಸಲಾಗುವುದು. 17ರಂದು ಮೊದಲ ಸಭೆ ನಡೆಯಲಿದೆ ಎಂದು ಸಂಸದರು ಹೇಳಿದ್ದಾರೆ.


ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಶನಿವಾರ ಪರಿಶೀಲನೆ ನಡೆಸಿದ ಅವರು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.


ಪಂಪ್‌ವೆಲ್‌ನಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ, ಮಾಂಕಾಳಿಪಡ್ಪು ಸಂಪರ್ಕ ರಸ್ತೆ ಹಾಗೂ ರೈಲ್ವೆ ಕೆಳಸೇತುವೆ, ಮುಳಿಹಿತ್ಲುವಿನಲ್ಲಿ ರಿವರ್ ಫ್ರಂಟ್ ಯೋಜನೆ, ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ, ವೆನ್ಲಾಕ್‌ನಲ್ಲಿ ಸರ್ಜಿಕಲ್ ಬ್ಲಾಕ್ ಕಾಮಗಾರಿಗಳ ವೀಕ್ಷಣೆ ನಡೆಸಲಾಯಿತು.


33 ಕಾಮಗಾರಿ ಪ್ರಗತಿ: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1 ಸಾವಿರ ಕೋಟಿ ರೂ.ಗಳ ಕಾಮಗಾರಿ ಮಂಗಳೂರಿಗೆ ಕೇಂದ್ರದಿಂದ ಮಂಜೂರಾಗಿದೆ. ಅವುಗಳಲ್ಲಿ 745 ಕೋಟಿ ರೂ.ಗಳ ಕಾಮಗಾರಿ ಪೂರ್ತಿಯಾಗಿದೆ. 831 ಕೋಟಿ ರೂ. ನೇರ ಅನುದಾನ ಲಭಿಸಿದೆ. ಪ್ರಸಕ್ತ 55 ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ 33 ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕು ಕಾಮಗಾರಿ ಪಿಪಿಪಿ ಮಾದರಿಯಲ್ಲಿ ನಡೆಯಲಿದೆ ಎಂದರು.


ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ 2024 ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳಲಿದೆ. ಕಾಂಕ್ರಿಟ್ ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಇದು ಮಂಗಳೂರು ಪೇಟೆಗೆ ಬೈಪಾಸ್ ರಸ್ತೆಯಾಗಿ ಬಳಕೆಯಾಗಲಿದೆ ಎಂದರು.

ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು,ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉಪ ಮೇಯರ್ ಸುನಿತಾ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣಪ್ರಭ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net