ನಗರ ಸುಸ್ಥಿರ ಅಭಿವೃದ್ದಿಗೆ ಸ್ಮಾರ್ಟ್ ತಂತ್ರಜ್ಞಾನ: ಬಿಸಿಯು- ವೂಲ್ವರ್ ಹ್ಯಾಂಪ್ಟನ್ ವಿವಿ ಸಹಯೋಗ

city university
Published on

ಬೆಂಗಳೂರು: ಮಹಾನಗರಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುವ ಆಶಯಗಳಿಗೆ ಹೆಚ್ಚಿನ ಉತ್ತೇಜನ ನೀಡುವಂತೆ ಕೋರಿ ಬೆಂಗಳೂರು ನಗರ ವಿಶ್ವವಿದ್ಯಾಲಯ ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಶೀಘ್ರ ಸಲ್ಲಿಸಲಿದೆ.

ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳು ಕಿಷ್ಕಿಂಧೆಯ ಸ್ವರೂಪ ಪಡೆಯುತ್ತಿವೆ. ವಲಸೆಯಿಂದಾಗಿ ನಗರೀಕರಣದ ಪರಿಣಾಮ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ನಾಗರಿಕರು ಸರ್ಕಾರಿ ಕಾರ್ಯಕ್ರಮಗಳು ಸೇರಿ ಮೂಲಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಲು ಸುಸ್ಥಿರವಾದ ಸ್ಮಾರ್ಟ್ ಸಿಟಿ ರೂಪಿಸುವ ಸರ್ಕಾರದ ಆಶಯಕ್ಕೆ ಪೂರಕವಾಗಿ ನೀತಿ ನಿರೂಪಣೆ, ಪರಿಹಾರ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಜ್ಞಾನ ಆಧಾರಿತ ಸೌಲಭ್ಯಗಳನ್ನು ತಲುಪಿಸಿ ಸುಸ್ಥಿರ ಅಭಿವೃದ್ಧಿಗೆ ಮನ್ನಣೆ ನೀಡುವಂತೆ ಸಲಹೆ ನೀಡಲಾಗುತ್ತದೆ.

ಈ ಒಂದು ಪರಿಕಲ್ಪನೆಯೊಂದಿಗೆ ಬೆಂಗಳೂರು ನಗರ ವಿವಿ ಹಾಗೂ ಇಂಗ್ಲೆಂಡ್‌ನ ವೂಲ್ವರ್ ಹ್ಯಾಂಪ್ಟನ್ ವಿವಿ ಸಹಯೋಗದಲ್ಲಿ ಸ್ಮಾರ್ಟ್ ತಂತ್ರಜ್ಞಾನದಿಂದ ಪರಿಹಾರಾತ್ಮಕ ಸೂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಕಳೆದ ವರ್ಷ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ನಗರಗಳನ್ನು ಕಾಡುತ್ತಿರುವ ಪರಿಸರ, ಆರೋಗ್ಯ, ಶಿಕ್ಷಣ, ಸಂಚಾರ, ಭದ್ರತೆ, ನೀರಿನ ಸಮಸ್ಯೆ ಸೇರಿ ಪ್ರಮುಖ ವಿಷಯಲ್ಲಿ ದತ್ತಾಂಶ ಕ್ರೋಡೀಕರಿಸಿ ವಿಶ್ಲೇಷಿಸಿ ಪರಿಹಾರದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಎರಡೂ ವಿವಿಗಳ ಸಹಯೋಗದಲ್ಲಿ ಈವರೆಗೆ ನಡೆದಿರುವ ಸಂಶೋಧನೆ, ದತ್ತಾಂಶ ಸಂಗ್ರಹ, ಬೋಧಕ ವರ್ಗಕ್ಕೆ ಪುನರ್ ಮನನ ತರಗತಿ, ಪ್ರಬಂಧ ಮಂಡನೆ ಸೇರಿ ಆಯಾ ವಿಷಯಸೂಚಿಗಳ ಸಾಧಕ-ಬಾಧಕಗಳ ಪರಾಮರ್ಶೆ ಮುಂದಿನ ವಾರ (ಮಾ.25ರಿಂದ 29ರವರೆಗೆ) ವೂಲ್ವರ್ ಹ್ಯಾಂಪ್ಟನ್ ವಿವಿಯಲ್ಲಿ ನಿಗದಿಯಾಗಿದೆ. ಇದರಲ್ಲಿ ನಗರ ವಿವಿಯ ಕುಲಪತಿ ಪ್ರೊ. ಲಿಂಗರಾಜು ಗಾಂಧಿ ಪಾಲ್ಗೊಳ್ಳಲಿದ್ದು, ಒಡಂಬಡಿಕೆ ಅವಧಿಯನ್ನು ವಿಸ್ತರಿಸುವ ಹಾಗೂ ಇತರ ಕಾರ್ಯಕ್ರಮಗಳ ಸೇರ್ಪಡೆಗೆ ಚರ್ಚೆ ನಡೆಸಲಿದ್ದಾರೆ.

ಪಠ್ಯದಲ್ಲಿ ಸೇರ್ಪಡೆಗೆ ಚಿಂತನೆ:

ಕೋವಿಡ್ ಸಾಂಕ್ರಾಮಿಕದ ವೇಳೆ ಆರೋಗ್ಯ ಕ್ಷೇತ್ರದ ಪಾತ್ರ, ಮಹತ್ವ ಹಾಗೂ ಜನರಿಗೆ ಒದಗಿಸಲಾದ ಲಸಿಕೆ ಅಭಿಯಾನ, ಚಿಕಿತ್ಸಾ ಕ್ರಮ ಇತ್ಯಾದಿ ಬಗ್ಗೆ ನಿಖರವಾಗಿ ಎಲ್ಲೂ ದಾಖಲಾಗಿಲ್ಲ. ಇದನ್ನು ಈ ಎರಡೂ ವಿವಿಗಳ ಸಂಶೋಧನಾ ತಂಡ ಅಂಕಿ-ಅಂಶ ಸಹಿತ ದಾಖಲೀಕರಣ ಮಾಡಿದೆ. ಇದು ಭವಿಷ್ಯದಲ್ಲಿ ಇಂತಹದೇ ಅವಘಡ ಸಂಭವಿಸಿದಲ್ಲಿ ಪರಿಹಾರ ಕಂಡುಕೊಳ್ಳಲು ಆಕಾರ ಸಾಮಗ್ರಿಯನ್ನಾಗಿ ಬಳಸಿಕೊಳ್ಳಬಹುದಾಗಿದೆ. ಇದೇ ರೀತಿ ಬೆಂಗಳೂರನ್ನು ಕಾಡುತ್ತಿರುವ ಸಂಚಾರ ಸಮಸ್ಯೆಗೆ ತಂತ್ರಜ್ಞಾನ ನಿರ್ವಹಣೆ ಮೂಲಕ ಪರಿಹಾರಗಳನ್ನು ಸೂಚಿಸಲಾಗಿದೆ. ಹೇಗೆಂದರೆ ವ್ಯಕ್ತಿಯೊಬ್ಬರು ಕಾಯಿಲೆಗೆ ಒಳಗಾದಲ್ಲಿ ನೇರವಾಗಿ ಆಸ್ಪತ್ರೆಗೆ ಸೇರುವ ಬದಲು ಆ್ಯಪ್ ಮೂಲಕ ವೈದ್ಯಕೀಯ ಪರಿಹಾರವನ್ನು ಪಡೆದು ಮನೆಯಲ್ಲೇ ಗುಣಮುಖವಾಗುವಂತಹ ವ್ಯವಸ್ಥೆ ಅಳವಡಿಸಿಕೊಳ್ಳಬಹುದಾಗಿದೆ. ಜತೆಗೆ ಎಲ್ಲ ಸೇವೆಗಳನ್ನು ಡಿಜಿಟಲ್ ರೂಪಕ್ಕೆ ಮೇಲ್ದರ್ಜೆಗೇರಿಸಿ ಜನರಿಗೆ ಕೈಗೆಟಕುವ ಸೇವೆ ಒದಗಿಸುವುದು ಹಾಗೂ ಸಮೂಹ ಸಾರಿಗೆಗೆ ಒತ್ತು ನೀಡುವ ಅಂಶಗಳು ಅಧ್ಯಯನ ವರದಿಯಲ್ಲಿ ಅಡಕಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಶೋಧನೆ ವೇಳೆ ಕಂಡುಕೊಂಡ ಅಂಶಗಳನ್ನು ಪಠ್ಯದಲ್ಲಿ ಸೇರ್ಪಡಿಸಲು ನಗರ ವಿವಿ ಚಿಂತನೆ ನಡೆಸಿದೆ.

ಕಿರು ಅವಧಿಯ ಆನ್‌ಲೈನ್ ಕೋರ್ಸ್:

ನಗರ ವಿವಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಸಂಶೋಧನೆ, ಆವಿಷ್ಕಾರ ಚಟುವಟಿಕೆಗೆ ಒತ್ತು ನೀಡಲಾಗುತ್ತಿದೆ. ಎಲ್ಲ ಪದವಿಗಳ ಕೋರ್ಸ್‌ಗಳಲ್ಲಿ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗಿದೆ. ಪದವಿಯ ಹೊರಗೂ ಆಸಕ್ತ ನಾಗರಿಕರಿಗೆ ಜ್ಞಾನ ವೃದ್ಧಿಸಿಕೊಳ್ಳಲು ಕಿರು ಅವಧಿಯ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಅನ್‌ಲೈನ್ ಮೂಲಕ ಒದಗಿಸಲು ಮುಂದಿನ ಜೂನ್ ತಿಂಗಳ ಬಳಿಕ ಚಾಲನೆ ನೀಡಲಾಗುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಕೌನ್ಸೆಲಿಂಗ್, ಇನ್‌ಕ್ಯೂಬೇಷನ್ ಸೆಂಟರ್, ಸ್ಟಾರ್ಟಪ್ ಕೇಂದ್ರ, ಉದ್ದಿಮೆಗಳ ಸಹಯೋಗದಲ್ಲಿ ಕೌಶಲ ತರಬೇತಿ ಸಹಿತ ಇತರ ಕಾರ್ಯಕ್ರಮಗಳನ್ನು ಜಂಟಿಯಾಗಿ ಕೈಗೆತ್ತಿಕೊಳ್ಳಲಾಗುತ್ತದೆ.

ಡಿಜಿಟಲ್ ಯುಗದಲ್ಲಿ ವಿವಿಗಳು ಜ್ಞಾನ ಕೇಂದ್ರಗಳಾಗಬೇಕೆಂಬ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ನಗರ ವಿವಿಯಲ್ಲಿ ಬಹುಶಿಸ್ತೀಯ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ತಂತ್ರಜ್ಞಾನದ ಲಾಭವನ್ನು ಪೂರ್ಣವಾಗಿ ಬಳಸಿಕೊಂಡು ವಿದ್ಯಾರ್ಥಿಗಳನ್ನು ಕೌಶಲವಂತರನ್ನಾಗಿಸಲು ಆದ್ಯತೆ ನೀಡಲಾಗಿದೆ. ವೂಲ್ವರ್ ಹ್ಯಾಂಪ್ಟನ್ ವಿವಿಯೊಂದಿಗೆ ಆಗಿರುವ ಒಡಂಬಡಿಕೆ ಮುಂದುವರಿಸುವ ಆಶಯ ಇದೆ.

- ಪ್ರೊ. ಲಿಂಗರಾಜ ಗಾಂಧಿ, ಬೆಂ. ನಗರ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net