

ರಾಷ್ಟ್ರ ಮಟ್ಟದ ಪ್ರೊ ಕಬಡ್ಡಿ, ಬ್ಯಾಡ್ಮಿಂಟನ್‌ನಂತಹ ಪಂದ್ಯಾವಳಿಗಳನ್ನು ಇನ್ನು ಮುಂದೆ ಮಂಗಳೂರಿನಲ್ಲಿ ಆಯೋಜಿಸಲು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಸಜ್ಜಾಗಿ ನಿಂತಿದೆ. ಆಸಕ್ತರು ಇಲ್ಲಿ ತರಬೇತಿಯನೂ ್ನಪಡೆಯಬಹುದು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಉರ್ವ ಮಾರುಕಟ್ಟೆ ಬಳಿ ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಗೊಂಡು ಸಿಎಂ ಸಿದ್ದರಾಮಯ್ಯ ಅವರಿಂದ ಮೇ 16ರಂದು ಉದ್ಘಾಟನೆಗೊಂಡಿದೆ. ಈ ಮೂಲಕ ಮಂಗಳೂರಿನ ಕ್ರೀಡಾ ಪ್ರೇಮಿಗಳ ಬಹು ಕಾಲದ ಬೇಡಿಕೆ ಈಡೇರಿದಂತಾಗಿದೆ.
ಸುಮಾರು 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆರು ಕಬಡ್ಡಿ ಕೋರ್ಟ್ ಸಹಿತ, ಮೂರು ಬ್ಯಾಡ್ಮಿಂಟನ್, ಪ್ರೇಕ್ಷಕರ ಗ್ಯಾಲರಿ, ಕೆಳ ಅಂತಸ್ತಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿರುವ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ಕ್ರೀಡೆಗಳನ್ನು ಆಯೋಜನೆ ಮಾಡಬಹುದಾಗಿದೆ. ಆಗಸ್ಟ್‌ನಲ್ಲಿ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.
ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಎರಡು ಮಹಡಿ ಕ್ರೀಡೆಗೆ ಮೀಸಲಿಡಲಾಗಿದೆ. ಕೆಳ ಭಾಗದಲ್ಲಿ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಅಂಕಣವಿದೆ. ವುಡನ್ ಪ್ಲೋರ್‌ನ ಮೇಲೆ 6 ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಮ್ಯಾಟ್ ಅಳವಡಿಸಿ 3 ಕಬಡ್ಡಿ ಕೋರ್ಟ್ ನಿರ್ಮಾಣವಾಗಿದೆ. ಗ್ಯಾಲರಿಯಲ್ಲಿ ಸುಮಾರು 400 ಮಂದಿ ಕುಳಿತುಕೊಂಡು ಕ್ರೀಡೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಜಿಮ್, ಕ್ರೀಡಾಪಟುಗಳಿಗೆ ತಂಗಲು ವ್ಯವಸ್ಥೆ, ಶೌಚಗೃಹ, ಡೈನಿಂಗ್ ಹಾಲ್, ಲಾಕರ್, ಅತಿಥಿಗಳಿಗೆ ತಂಗಲು 6 ಸುಸಜ್ಜಿತ ಕೊಠಡಿ ಮಾಡಲಾಗಿದೆ. ಮೂರನೇ ಲೆವೆಲ್‌ನಲ್ಲಿ 12.50 ಮೀ. ಎತ್ತರದ ಆಟದ ಪ್ರದೇಶ ಇದ್ದು, ಇದಕ್ಕೆ ಶೀಟ್ ರೂಫಿಂಗ್ ಮಾಡಲಾಗಿದೆ. ಒಟ್ಟು ವ್ಯವಸ್ಥೆ ಸೌಂಡ್ ಹಾಗೂ ಟೆಂಪರೇಚರ್ ಪ್ರೂಫ್ ಆಗಿದೆ. ಸಾರ್ವಜನಿಕರಿಗೆ ಕ್ರೀಡಾ ಸಂಕೀರ್ಣಕ್ಕೆ ಆಗಮಿಸಲು ಮೂರು ಕಡೆಯಿಂದ ರಸ್ತೆಯ ವ್ಯವಸ್ಥೆ ಇದೆ. ಅಲ್ಲಿಯೂ ಮೂಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಾಣಿಜ್ಯ ಉದ್ದೇಶಕ್ಕಾಗಿ ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಬರುವ ಬಾಡಿಗೆಯಿಂದ ಕ್ರೀಡಾ ಸಂಕೀರ್ಣದ ನಿರ್ವಹಣೆ ಮಾಡಲು ಚಿಂತನೆ ನಡೆಸಲಾಗಿದೆ.
ಮಂಗಳೂರಿಗೆ ವಿಶ್ವದರ್ಜೆಯ ಬ್ಯಾಡ್ಮಿಂಟನ್ ಹಾಗೂ ಕಬಡ್ಡಿ ಕೋರ್ಟ್ ನಿರ್ಮಾಣದ ಕನಸು ಕಳೆದ 13 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸಾಕಾರಗೊಂಡಿದೆ. ಬಹಳಷ್ಟು ಅಡೆತಡೆಗಳು ಎದುರಾದರೂ ಅವೆಲ್ಲವುಗಳನ್ನು ಸವಾಲಾಗಿ ಸ್ವೀಕರಿಸಿ ಯೋಜನೆ ಸಾಕಾರಗೊಳಿಸುವಲ್ಲಿ ಸಫಲರಾಗಿದ್ದೇವೆ. ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ರಾಷ್ಟ್ರ ಮಟ್ಟಕ್ಕೆ ಹೋಗುವ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವಿದೆ.
ಸಂತೋಷ್ ಕುಮಾರ್ ಶೆಟ್ಟಿ
ಅಧ್ಯಕ್ಷರು, ದ.ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್