ಮೈಸೂರಿನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್

Published on

ಮೈಸೂರು: ಎನ್‌ಐಇ ಕಾಲೇಜಿನಲ್ಲಿ ಡಿ.11 ರಿಂದ 15ರವರೆಗೆ ಪ್ರತಿಷ್ಠಿತ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲೆ ಡಾ.ರೋಹಿಣಿ ನಾಗಪದ್ಮ ತಿಳಿಸಿದರು.

ಕಳೆದ ಬಾರಿ ಸಹ ನಮ್ಮ ಕಾಲೇಜಿನಲ್ಲಿ ಹ್ಯಾಕಥಾನ್ ಆಯೋಜಿಸಲಾಗಿತ್ತು. ಈ ಬಾರಿ ದೇಶದ ವಿವಿಧ ಭಾಗಗಳಿಂದ 28 ತಂಡಗಳಿಂದ 168 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಣ ಸಚಿವಾಲಯದ ಇನ್ನೋವೇಷನ್ ಸೆಲ್, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಉಲ್ಲೇಖಿಸಿದ ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಆಟೋಮೇಷನ್, ಅತ್ಯಾಧುನಿಕ ರೋಬಾಟಿಕ್ಸ್, ಡ್ರೋನ್‌ಗಳ ಸವಾಲುಗಳ ವಿಷಯವಾಗಿ ಈ ಸ್ಪರ್ಧೆಯಲ್ಲಿ ಮಾದರಿ ಸಿದ್ಧಪಡಿಸಲಾಗುವುದು. ಡಿ.15ರವರೆಗೆ ಪ್ರದರ್ಶನ ಇರಲಿದೆ ಎಂದು ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಸುಮಾರು ಐದು ಲಕ್ಷ ವಿದ್ಯಾರ್ಥಿಗಳಲ್ಲಿ 168 ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಗಿದೆ. ಹೀಗಾಗಿ ಇದು ಪ್ರತಿಷ್ಠಿತ ಸ್ಪರ್ಧೆಯಾಗಿದೆ. ಇವರು ಸಿದ್ಧಪಡಿಸುವ ಮಾದರಿಗೆ ಅಗತ್ಯವಾದ ಎಲ್ಲ ಸಾಧನ, ಸಲಕರಣೆ ತಮ್ಮ ಕಾಲೇಜು ಒದಗಿಸುವ ಸಾಮರ್ಥ್ಯ ಹೊಂದಿರುವುದರಿಂದಾಗಿ ಎರಡನೇ ಬಾರಿಗೆ ಕಾಲೇಜನ್ನು ಆಯ್ಕೆ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಘಟಕರಾದ ಡಾ.ವಿ.ವಿಕ್ರಮ್ ಆತ್ರೇಯ, ಎನ್.ಎಸ್.ಶ್ರೀಕಾಂತ್, ಡಾ.ವಿ.ಲಕ್ಷ್ಮೀ ರಂಗನಾಥ್, ಡಾ.ಅಭಿಷೇಕ್ ಎ.ಪಾಠಕ್, ಹರ್ಷಿತಾ ದಿವಾಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net