ಕರಾಟೆ, ಬಾಕ್ಸಿಂಗ್‌ನಿಂದ ಬುದ್ಧಿ ಚುರುಕು

ಬೇಲೂರು ಪಟ್ಟಣದಲ್ಲಿ ವಜ್ರಕಾಯ ಕರಾಟೆ ಮತ್ತು ಬಾಕ್ಸಿಂಗ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸುತ್ತಿರುವ ಗಣ್ಯರು.
ಬೇಲೂರು ಪಟ್ಟಣದಲ್ಲಿ ವಜ್ರಕಾಯ ಕರಾಟೆ ಮತ್ತು ಬಾಕ್ಸಿಂಗ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸುತ್ತಿರುವ ಗಣ್ಯರು.
Published on

ಬೇಲೂರು: ಕರಾಟೆ ಮತ್ತು ಬಾಕ್ಸಿಂಗ್ ಅಪಾಯಕಾರಿಯಾದರೂ ಮನುಷ್ಯನ ಬುದ್ಧಿಮತ್ತೆಗೆ ಹಿಡಿದ ಕೈಗನ್ನಡಿಯಾಗಿದ್ದು, ಮಹಿಳೆಯರಿಗೆ ಇದು ಅತ್ಯವಶ್ಯವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ವಜ್ರಕಾಯ ಕರಾಟೆ ಮತ್ತು ಬಾಕ್ಸಿಂಗ್ ಅಸೋಸಿಯೇಷನ್‌ನಿಂದ ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕರಾಟೆ ಮತ್ತು ಬಾಕ್ಸಿಂಗ್ ಕಲಿತರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಮನಸ್ಸು ಏಕಾಗ್ರತೆಯಿಂದ ಚಿಂತಿಸಲು ಸಹಕಾರಿಯಾಗಿದೆ. ಜತೆಗೆ ಈ ಕ್ರೀಡೆಯನ್ನು ಚಾಕಚಕ್ಯತೆಯಿಂದ ಆಡಬೇಕಿರುವುದರಿಂದ ಭಾಗವಹಿಸಿರುವ ಎಲ್ಲರೂ ಉತ್ತಮ ಪ್ರದರ್ಶನಕ್ಕೆ ಮುಂದಾಗಬೇಕು. ಅಲ್ಲದೆ ವಜ್ರಕಾಯ ಕರಾಟೆ ಮತ್ತು ಬಾಕ್ಸಿಂಗ್ ಅಸೋಸಿಯೇಷನ್‌ನವರು ಕರಾಟೆ ಮತ್ತು ಬಾಕ್ಸಿಂಗ್ ಪಂದ್ಯಾವಳಿ ನಡೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಪ್ರಸ್ತುತ ಎಲ್ಲ ಮಕ್ಕಳು, ಅದರಲ್ಲೂ ಬಾಲಕಿಯರು ಮತ್ತು ಮಹಿಳೆಯರು ಕರಾಟೆ ತರಬೇತಿ ಪಡೆಯುವುದು ಅತ್ಯವಶ್ಯಕ ಎಂದರು.

ಯುರೋ ಕಿಡ್ಸ್ ಶಾಲೆ ಮುಖ್ಯಸ್ಥ ರಂಗನಾಥ್ ಮಾತನಾಡಿ, ಮಕ್ಕಳು ಕರಾಟೆ ಕಲಿಯುವುದರಿಂದ ಶಿಸ್ತು, ಏಕಾಗ್ರತೆ, ತಾಳ್ಮೆ ಬರುವುದರ ಜತೆಗೆ ಬುದ್ಧಿ ಚುರುಕಾಗುತ್ತದೆ ಎಂದರು.

ಸಂಸ್ಥೆಯ ಮುಖ್ಯಸ್ಥ ಕೌಶಿಕ್‌ರಾವ್ ಮಾತನಾಡಿ, ಕಳೆದ 12 ವರ್ಷಗಳಿಂದ ಬೇಲೂರಿನ ಪಾಂಡುರಂಗ ದೇವಸ್ಥಾನ ಮತ್ತು ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳಿಗೆ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಬೇಲೂರಿನಲ್ಲಿ ಆಯೋಜಿಸಲಾಗುವುದು ಎಂದರು.

ಗೌರವಾಧ್ಯಕ್ಷ ಬಾಬುರಾವ್, ಕರವೇ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಅಬ್ದುಲ್ ಖಾದರ್, ವೈದ್ಯಾಧಿಕಾರಿ ಡಾ.ಅಕ್ಷತ್‌ಗೌಡ, ನಿವೃತ್ತ ಉಪನ್ಯಾಸಕ ಜಯಣ್ಣಗೌಡ, ಹಿರಿಯ ಕರಾಟೆ ತರಬೇತುದಾರರಾದ ಪಂಚಪ್ಪ ಸಾಗರ, ಯೋಗೇಶ್ ಚಿಕ್ಕಮಗಳೂರು, ರಿಯಾಜ್, ನವೀನ್, ಹರೀಶ್, ವೆಂಕಟೇಶ್, ಗೋವಿಂದರಾಜು, ಮನು, ಕಾಂತರಾಜ್, ಆರಿಫ್, ಕಲಂದರ್ ಮತ್ತು ಸಂಸ್ಥೆಯ ಮುಖ್ಯ ತರಬೇತುದಾರರಾದ ಕೇಶವಮೂರ್ತಿ, ಶಶಿಕುಮಾರ್, ಸಾತ್ವಿಕ್‌ಗೌಡ, ಹರ್ಷಿತ್, ಸೌಮ್ಯಾ, ಹರ್ಷ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net