

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ ಹಾಗೂ ತಾಂತ್ರಿಕ ಕೌಶಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ರಿಲೀಯೋ ಸಂಸ್ಥೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬ್ರಿಲೀಯೋ ಸಂಸ್ಥೆಯ ಮ್ಯಾನೇಜರ್ ಮೇಘನಾ ತಿಳಿಸಿದರು.
ಆನೇಕಲ್ ತಾಲೂಕು ಸರ್ಜಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಮಾರ್ಟ್ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆ ಮುಖೇನ ತಂತ್ರಜ್ಞಾನ ವಿಭಾಗದಲ್ಲಿ ದೇಶವನ್ನು ಮುನ್ನಡೆಸಲು ಸಾಧ್ಯವಾಗಿದೆ. ಖಾಸಗಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರಗತಿಗಾಗಿ ಮನೆಯವರು ಮಕ್ಕಳ ಕಲಿಕೆಗೆ ಬೇಕಾಗುವಂತಹ ಎಲ್ಲ ಸಾಮಗ್ರಿಗಳನ್ನು ಕೊಡಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತಹ ವಿದ್ಯಾರ್ಥಿಗಳ ಆರ್ಥಿಕವಾಗಿ ಹಿಂದುಳಿದಿದ್ದು, ಅವರ ಶೈಕ್ಷಣಿಕ ಕಲಿಕೆಗೆ ಬೇಕಾಗುವಂತಹ ಸಾಮಗ್ರಿಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಇದನ್ನು ಮನಗೊಂಡ ಬ್ರಿಲಿಯೋ ಸಂಸ್ಥೆಯು ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ವಿವಿಧ ಶಾಲೆಗಳನ್ನು ಆಯ್ಕೆ ಮಾಡಿದ್ದು, ಅದರಂತೆ ಸರ್ಜಾಪುರದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಟಿವಿ, ಸ್ಮಾರ್ಟ್ ಟ್ಯಾಬ್, ಯುಪಿಎಸ್ ಸೇರಿ ವಿವಿಧ ವಸ್ತುಗಳನ್ನು ಉಚಿತವಾಗಿ ನೀಡಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಜಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಡಾ.ಎನ್.ಕಲಾವತಿ ಮೂರ್ತಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಯಾದರೆ ಕುಟುಂಬವು ಸಹ ಅಭಿವೃದ್ಧಿ ಹೊಂದುತ್ತದೆ ಇದರಿಂದ ದೇಶವು ಮತ್ತಷ್ಟು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತದೆ ಎಂದರು.
ಬ್ರಿಲಿಯೋ ಸಂಸ್ಥೆಯ ಅಭಿಷೇಕ್, ರಜಂನ್ ಶಿವಪ್ರಸಾದ್, ಮೈಕ್ರೋಸ್‌ಟಾ ಸಂಸ್ಥೆಯ ಮನೀಶ್, ಶಿಕ್ಷಕರಾದ ಅನಿತಾ, ಜಯರತ್ನ, ರೇಣುಕಾ, ಆಶ್ವಿನಿ, ಮಾನಸ, ಸೌಭಗ್ಯ, ಸುಧಾ, ರಾಮಕೃಷ್ಣಯ್ಯ, ಶುಭಾ, ಎಸ್.ಆರ್.ಎ್ನ ವಸಂತ್ ಇದ್ದರು.