ಸ್ಮಾರ್ಟ್‌ಕ್ಲಾಸ್ ಸೌಲಭ್ಯ ನನ್ನ ಕನಸು

15Anand4
Published on

ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪಾಲಕರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಇಲ್ಲಿನ ಕುವೆಂಪು ನಗರದಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ಗ್ರಾಮೀಣ ಕ್ಷೇತ್ರದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿ, ಒಬ್ಬ ಗುಮಾಸ್ತ ಅಥವಾ ರಾಷ್ಟ್ರಪತಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಕನಸು ಕಾಣುತ್ತಾರೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಅಮ್ಮ-ಅಪ್ಪನ ಕನಸು ನನಸು ಮಾಡಬೇಕು ಎಂದರು.

ಕ್ಷೇತ್ರದ ಜನಪ್ರತಿನಿಧಿಯಾಗಿ ಶೈಕ್ಷಣಿಕ ಮೂಲಸೌಲಭ್ಯ ಕಲ್ಪಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ಸ್ಮಾರ್ಟ್‌ಕ್ಲಾಸ್ ಸೌಲಭ್ಯ ನನ್ನ ಕನಸಾಗಿದ್ದು, ಶೀಘ್ರದಲ್ಲೇ ಒದಗಿಸಲಾಗುವುದು. ಶೇ.90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ನಗದು ಪುರಸ್ಕಾರ ನೀಡಲಾಗುವುದು ಎಂದು ಘೋಷಿಸಿದರು.

ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಾಲೂಕುಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಿ ಬೆಳೆಗುಂದಿ ಭಾಗದಲ್ಲಿ ಆರು ಎಕರೆ ಭೂಮಿಯನ್ನು ಈಗಾಗಲೇ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಯುವರಾಜ ಕದಂ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ದಾಸಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net