

ಹುಬ್ಬಳ್ಳಿ: ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕುಂಟುತ್ತ ಸಾಗಿವೆ. ಇದುವರೆಗೆ ಕರೊನಾ, ಮಳೆ, ಹಬ್ಬ ಎಂದು ನೆಪ ಹೇಳಲಾಗಿದೆ, ಇನ್ನು ವಿಳಂಬ ಸಹಿಸುವುದಿಲ್ಲ, ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಸಿದರು.
ಮಂದ ಗತಿಯಲ್ಲಿ ಸಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಚುರುಕು ನೀಡುವ ಸಲುವಾಗಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ಕೆಲವೆಡೆ ಕೈಗೊಂಡಿರುವ ಕಾಮಗಾರಿಗಳು ಅವ್ಯವಸ್ಥೆಯಿಂದ ಕೂಡಿವೆ. ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಘಂಟಿಕೇರಿ, ಜೋಳದ ಓಣಿಯಲ್ಲಿ ರಸ್ತೆ ಬದಿ ಮರ ತೆರವು ಮಾಡಲು ಸಂಬಂಧಿಸಿದ ಇಲಾಖೆ 7 ತಿಂಗಳಾದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗಟಾರ ಕಾಮಗಾರಿ ಅರ್ಧಕ್ಕೆ ನಿಂತಿವೆ. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಗಟಾರ, ಯುಜಿಡಿ ಕಾಮಗಾರಿ ಪೂರ್ಣಗೊಂಡರೂ ಕೆಲವೆಡೆ ರಸ್ತೆ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಧೂಳು ಹೆಚ್ಚಾಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೆ ರಸ್ತೆ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ನಿರಂತರ ನೀರು ಹಾಗೂ ಯುಜಿಡಿ ಪೈಪ್ಲೈನ್ ಕಾಮಗಾರಿ ಎಲ್ಲಿ ಆರಂಭವಾಗಿಲ್ಲವೋ ಅಲ್ಲಿ ಕೂಡಲೆ ಕೆಲಸ ಆರಂಭಿಸುವಂತೆ ಕೆಯುಐಡಿಎಫ್ಸಿ, ಅಮೃತ್ ಯೋಜನೆ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಮುಂದಿನ ವಾರ ಪುನಃ ಸ್ಥಳ ಭೇಟಿ ಮಾಡುತ್ತೇನೆ. ಇದೇ ಅವ್ಯವಸ್ಥೆ, ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.
ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಧಿಕ್ಷಕ ಇಂಜಿನಿಯರ್ ಟಿ. ತಿಮ್ಮಪ್ಪ, ಸ್ಮಾರ್ಟ್ ಸಿಟಿ ಕಂಪನಿಯ ಮುಖ್ಯ ಇಂಜಿನಿಯರ್ ಎಂ. ನಾರಾಯಣ, ಹೆಸ್ಕಾಂ, ಪಾಲಿಕೆ ವಲಯ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಇತರರು ಇದ್ದರು.