ಜನತೆಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಿ

Smart City 10 Feb 20
Published on

ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನ ಸಾಮಾನ್ಯರಿಗೆ ತೊಂದರೆಯಾಗದಂತೆ, ವಿಳಂಬವಿಲ್ಲದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪುನರಾರಂಭ ಬಗ್ಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಮುಂದುವರಿಸಲು ಕೋರ್ಟ್ ಅನುಮತಿ ನೀಡಿದೆ. ಅಭಿಯಂತರರು ಕಾಮಗಾರಿಗೆ ವಸ್ತುಗಳನ್ನು ಸಂಗ್ರಹಿಸುವುದರ ಜತೆ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರೈಸಲು ಕ್ರಮ ವಹಿಸಬೇಕು ಎಂದರು.

31 ಕಾಮಗಾರಿ: ಸ್ಮಾರ್ಟ್ ಸಿಟಿ ಯೋಜನೆಯಡಿ 31 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ ಶೇ. 90ರಷ್ಟು ಪೂರ್ಣಗೊಂಡಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು. ಉಳಿದ ಕಾಮಗಾರಿಗಳನ್ನು ಮುಂದಿನ ಮುಂಗಾರು ಮಳೆ ಆರಂಭದ ಮುನ್ನ ಪೂರ್ಣಗೊಳಿಸಬೇಕು. ರಸ್ತೆಗಳ ಸಂಚಾರ ನಿಲುಗಡೆ ಮಾಡಿ ಕೈಗೊಂಡಿರುವ ಕಾಮಗಾರಿಗಳನ್ನು ರಾತ್ರಿ, ಹಗಲು ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಪ್ರತ್ಯೇಕ ಕಾರ್ಮಿಕರನ್ನು ನಿಯೋಜಿಸಬೇಕು. ಇದರಿಂದ ಮಾತ್ರ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಸಮನ್ವಯ ಅಗತ್ಯ: ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಜನ ಸಾಮಾನ್ಯರಿಗೆ ಅನಾನುಕೂಲ ಉಂಟಾಗಿದೆ. ಆದರೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಾಗ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದ್ದು, ಜನತೆ ಸಹಕರಿಸಬೇಕು. ನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ, ಗೇಲ್ ಇಂಡಿಯಾ ಕಂಪನಿಯ ಗ್ಯಾಸ್ ಪೈಪ್ ಅಳವಡಿಕೆ, ಪಾಲಿಕೆ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಎಲ್ಲ ಅಧಿಕಾರಿಗಳು ಹಾಗೂ ಅಭಿಯಂತರರು ಸಮನ್ವಯದೊಂದಿಗೆ ಕಾಮಗಾರಿಗಳನ್ನು ನಡೆಸಿದರೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಹೆಚ್ಚಿನ ತೊಂದರೆ ಉಂಟಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಳಂಬ ಸಲ್ಲದು: ಕಾಮಗಾರಿಗಳನ್ನು ಕೈಗೊಳ್ಳುವ ಸ್ಥಳದಲ್ಲಿ ಎಲ್ಲೆಂದರಲ್ಲಿ ಪೈಪ್‌ಗಳು ಹಾಗೂ ಮತ್ತಿತರ ವಸ್ತುಗಳನ್ನು ಹಾಕುವುದರಿಂದ ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಿ ದಾಸ್ತಾನು ಮಾಡಬೇಕು. ಕಾಮಗಾರಿ ಮುಗಿದ ನಂತರ ಆ ಸ್ಥಳಗಳು ಯಥಾಸ್ಥಿತಿಯಲ್ಲಿರುವಂತೆ, ಹೊಂಡ ತಗ್ಗು ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು. ರಸ್ತೆ ಕಾಮಗಾರಿ ಕೈಗೊಳ್ಳಲು ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಬೇಕು. ವಿನಾಃ ಕಾರಣ ಗುತ್ತಿಗೆದಾರರು ಕಾಮಗಾರಿಗಳನ್ನು ನಿಲ್ಲಿಸುವುದು ಕಂಡು ಬಂದಾಗ ತಕ್ಷಣ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ಪ್ರೊಬೆಶನರಿ ಐ.ಎ.ಎಸ್ ಮೋನಾ ರೋತ್, ಮುಡಾ ಆಯುಕ್ತ ದಿನೇಶ್ ಕುಮಾರ್, ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರಾ ಉಪಸ್ಥಿತರಿದ್ದರು.

ಮೇಯರ್ ಸಲಹೆ: ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಹಾನಗರ ಪಾಲಿಕೆಯ ಕಿರಿಯ ಅಭಿಯಂತರರ ನೆರವು ಪಡೆಯಬಹುದು. ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಮಳೆಯ ನೀರು ಎಲ್ಲೆಂದರಲ್ಲಿ ನುಗ್ಗಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಕಾಳಜಿ ವಹಿಸಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net