

ವಿಶೇಷ ವರದಿ ತುಮಕೂರು
ಸ್ಮಾರ್ಟ್ಸಿಟಿಯ ಅಧ್ವಾನಗಳು ಒಂದಲ್ಲ, ಎರಡಲ್ಲ. ವರ್ಷ ಕಳೆಯುವದರೊಳಗೆ ಸ್ಮಾರ್ಟ್ಸಿಟಿ ಕಾಮಗಾರಿಗಳ ನೈಜ ಬಣ್ಣ ಒಂದೊಂದೇ ಅನಾವರಣಗೊಳ್ಳುತ್ತಿವೆ. ಬಿ.ಎಚ್.ರಸ್ತೆಗೆ ಪರ್ಯಾಯ ರಸ್ತೆ ಎನಿಸಿರುವ ಗಂಗೋತ್ರಿ ಮುಖ್ಯರಸ್ತೆ (ಎಸ್ಐಟಿ ಬ್ಯಾಕ್ ಗೇಟ್& ಎಸ್ಎಸ್ ಪುರಂ ಮುಖ್ಯರಸ್ತೆ&ರಾಧಾಕೃಷ್ಣ ರಸ್ತೆ )ಯನ್ನು ಸ್ಮಾರ್ಟ್ಸಿಟಿ ಯೋಜನೆ ಉಳಿಕೆ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಏನಾದರೂ ಒಂದು ಸಮಸ್ಯೆಯಿಂದ ಈ ರಸ್ತೆಯನ್ನು ರಾತ್ರೋರಾತ್ರಿ ಅಗೆದು ರಿಪೇರಿ ಕಾಮಗಾರಿ ಕೈಗೊಳ್ಳುವುದರಿಂದ ಇಲ್ಲಿ ಸಂಚರಿಸುವರು ಪ್ರಾಣಭೀತಿಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ.
ಗಂಗೋತ್ರಿ ಮುಖ್ಯರಸ್ತೆ ತಿರುವಿನಲ್ಲೇ ಬಿ.ಎಚ್.ರಸ್ತೆಯ ುಟ್ಪಾತ್ಗೆ ಹೊಂದಿಕೊಂಡಿರುವ ಮಳೆ ನೀರು ಹರಿಯುವ ಚರಂಡಿ ಮೇಲಿನ ಸಿಮೆಂಟ್ ಬ್ಲಾಕ್ ಮುರಿದುಬಿದ್ದು 6&7 ತಿಂಗಳುಗಳೇ ಕಳೆದಿದೆ. ಈ ರಸ್ತೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಲ್ಲದೆ ಸಾರ್ವಜನಿಕರು ಓಡಾಡುತ್ತಾರೆ. ಇದು ಜೀವಕ್ಕೆ ಅಪಾಯಕಾರಿ ತರುವಂತಿದ್ದರು ಪಾಲಿಕೆ ಆಗಲಿ, ಸ್ಮಾರ್ಟ್ಸಿಟಿ ಅಧಿಕಾರಿಗಳಾಗಲಿ ದುರಸ್ತಿ ಪಡಿಸುವ ಗೋಜಿಗೆ ಹೋಗಿಲ್ಲ.
ಇನ್ನೂ ಜಯನಗರ, ಸಪ್ತಗಿರಿ, ಉಪ್ಪಾರಹಳ್ಳಿ ಭಾಗದ ಜನರು ಬಿ.ಎಚ್.ರಸ್ತೆಗೆ ಸೇರಲು ಈ ರಸ್ತೆ ಪ್ರಮುಖ ಸಂಪರ್ಕ ರಸ್ತೆ ಎನಿಸಿದೆ. ಹಾಗಾಗಿ, ನಿತ್ಯ ಸಾವಿರಾರು ದ್ವಿಚಕ್ರ ವಾಹನಗಳು, ಶಾಲಾ&ಕಾಲೇಜು ಬಸ್ಗಳ ಸಂಚಾರದಿಂದ ವಾಹನ ದಟ್ಟಣೆ ಇದ್ದೇ ಇರುತ್ತೆ. ಆದರೆ, ಈ ರಸ್ತೆ ಸ್ಮಾರ್ಟ್ಸಿಟಿ ಉಳಿಕೆ ಹಣದಲ್ಲಿ ಅಭಿವೃದ್ಧಿ ಪಡಿಸಿ ವರ್ಷ ಕಳೆಯುವಷ್ಟರಲ್ಲೇ ಗುಂಡಿಮಯವಾಗಿ ಮಾರ್ಪಟ್ಟಿದೆ. ಯುಜಿಡಿ ಸಂಪರ್ಕ ರಸ್ತೆ ಮಧ್ಯದಲ್ಲಿದ್ದು, ವಾಹನಗಳ ಭಾರದಿಂದ ಕೆಲವುಕಡೆ ರಸ್ತೆ ಕುಸಿದಿದೆ.
ಅವೈಜ್ಞಾನಿಕ ರೋಡ್ ಹಂಪ್ಸ್: ತುಮಕೂರಿನ ಶೆಟ್ಟಿಹಳ್ಳಿ ಅಂಡರ್ ಪಾಸ್ ಒಳಗೆ ಹಬ್ಬದ ಸಂದರ್ಭದಲ್ಲಿ ದಿಢೀರನೆ ಅವೈಜ್ಞಾನಿಕವಾದ ಪೈಬರ್ ಹಂಪ್ಸ್ನ ತ್ರಿವಳಿ ಪಟ್ಟಿಗಳನ್ನು ಅಳವಡಿಸಿದ್ದು, ದ್ವಿಚಕ್ರವಾಹನ ಸವಾರರಿಗೆ ಯಮಯಾತನೆಗೆ ಕಾರಣವಾಗಿತ್ತು. ಈ ಬಗ್ಗೆ ಸಾರ್ವಜನಿಕವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಗಾಗುವುದರೊಳಗೆ ಎರಡು ಪಟ್ಟಿಗಳನ್ನು ತೆಗೆದು ಒಂದು ಪಟ್ಟಿಯನ್ನು ಮಾತ್ರ ಬಿಡಲಾಗಿದೆ. ಅಂಡರ್ ಪಾಸ್ನ ಕೇವಲ 100 ಮೀ., ಅಂತರದಲ್ಲಿ ಎರಡು ಕಡೆ 6 ರಸ್ತೆ ಉಬ್ಬುಗಳಿವೆ. ವಾಹನ ಸವಾರರಿಗೆ ಇದು ದಾಟುವುದು ಒಂದು ಸವಾಲೆನಿಸಿದೆ.
ಸಮನ್ವಯ ಕೊರತೆ: ರಸ್ತೆ ಅಭಿವೃದ್ಧಿ ಪಡಿಸಿದ ಬಳಿಕ ಸಾಕಷ್ಟು ಕಡೆ ಗ್ಯಾಸ್ ಸಂಪರ್ಕ, ಬೆಸ್ಕಾಂ, ನೀರಿನ ಸಂಪರ್ಕಕ್ಕೆ ರಸ್ತೆ ಅಗೆಯಲಾಗಿದೆ. ಇದಲ್ಲದೆ, ವಾಲ್ ಚೇಂಬರ್ ನಿರ್ಮಾಣಕ್ಕೆ ಸಿಮೆಂಟ್ ರಿಟೈನರ್ ಬಳಸುವ ಬದಲು ಅವೈಜ್ಞಾನಿಕವಾಗಿ ರಾತ್ರೋರಾತ್ರಿ ಮಣ್ಣು ಹಾಕಿ ಮುಚ್ಚಿ ಕೈತೊಳೆದುಕೊಳ್ಳಲಾಗಿದೆ. ಚೇಂಬರ್ ಮುಚ್ಚಿದ ಬಳಿಕ ಅದರ ಮೇಲೆ ಮತ್ತೆ ಡಾಂಬರು ಹಾಕದೆ ಬಿಟ್ಟಿರುವುದು ಇಲಾಖೆಗಳ ನಡುವೆ ಪರಸ್ವರ ಸಮನ್ವಯ ಇಲ್ಲದೇ ಇರುವುದಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ.
ಯುಜಿಡಿಯಿಂದ ಕುಸಿದ ರಸ್ತೆ: ಯುಜಿಡಿ ಸಂಪರ್ಕ ಲೇನ್ ರಸ್ತೆ ಮಧ್ಯೆಭಾಗದಲ್ಲಿ ಹಾದು ಹೋಗಿದೆ. ಕಳಪೆ ಗುಣಮಟ್ಟದಿಂದ ಯುಜಿಡಿ ಸಂಪರ್ಕ ಕೂಡಿದ್ದು, ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುವುದರಿಂದ ಈ ಭಾರಕ್ಕೆ ಕೆಲವು ಕಡೆ ರಸ್ತೆ ಕುಸಿದು ಹಳ್ಳಗಳು ನಿರ್ಮಾಣವಾಗಿದೆ. ಕೆಲವು ಕಡೆ ಯುಜಿಡಿ ಉಕ್ಕಿ ಹರಿದು ರಸ್ತೆಯಲ್ಲಿ ಹರಿಯುತ್ತಿದ್ದು ರಸ್ತೆ ಹಾಳಾಗಲು ಇನ್ನಷ್ಟು ಕಾರಣವಾಗಿದೆ.