

ಹುಬ್ಬಳ್ಳಿ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಳು ಸ್ಮಾರ್ಟ ಸಿಟಿ ಕಂಪನಿಗಳ ಸಿಬ್ಬಂದಿಯನ್ನು ವಜಾಗೊಳಿಸದೇ ಕೆಲಸದಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದಿಂದ ಪ್ರಧಾನಿಗೆ ಮನವಿ ಮಾಡಲಾಗಿದೆ.
ಮಹಾಮಂಡಳದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹಾಗೂ ಕಂಪನಿಯ ಅನೇಕ ಸಿಬ್ಬಂದಿ ಸೇರಿ, ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ಮೂಲಕ ಮನವಿ ರವಾನಿಸಿದರು.
ಮಹಾಮಂಡಳದ ಉಪಾಧ್ಯಕ್ಷ ನಿವೃತ್ತ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ, ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಕಂಪನಿಯ ಇಂಜಿನಿಯರ್‌ಗಳು ಹಾಗೂ ಆಡಳಿತ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.
ಈ ವರ್ಷದ ಮಾರ್ಚ್ ಅಂತ್ಯಕ್ಕೆ ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಕಂಪನಿಗಳ ವ್ಯವಹಾರ ಸೇರಿ ದೇಶಾದ್ಯಂತ ಇಂತಹ ನೂರು ನಗರಗಳಲ್ಲಿನ ಕಂಪನಿ ಕಾರ್ಯಗಳನ್ನು ಕೊನೆಗೊಳಿಸುವಂತೆ 2024ರ ಜೂನ್ ನಲ್ಲಿ ಕೇಂದ್ರ ಸರ್ಕಾರದ ನಗರಾಭಿವದ್ಧಿ ಸಚಿವಾಲಯ ಆದೇಶ ಹೊರಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಆದೇಶ ಜಾರಿಯಾದರೆ ಕರ್ನಾಟಕದ ಸಿಬ್ಬಂದಿಯೂ ಸೇರಿ ದೇಶಾದ್ಯಂತ ಮೂರು ಸಾವಿರ ಸಿಬ್ಬಂದಿ ಬೀದಿಗೆ ಬೀಳುವ ಸ್ಥಿತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದ ಆದೇಶ ರದ್ದುಪಡಿಸಬೇಕು ಅಥವಾ ಹಿಂಪಡೆಯಬೇಕು.
ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ಸ್ಮಾರ್ಟ್ ಸಿಟಿ ಸಿಬ್ಬಂದಿಯನ್ನು ಮುಂದುವರೆಸಲು ಆದೇಶಿಸಬೇಕು. ಯಾರೊಬ್ಬರನ್ನೂ ವಜಾಗೊಳಿಸಬಾರದು.
ನೂರು ನಗರಗಳಲ್ಲಿ ಕಾರ್ಯನಿರತ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಧಕ್ಕೆ ತಂದಲ್ಲಿ ಪ್ರಧಾನಿಯವರ ಆಶಯಕ್ಕೆ ಚ್ಯುತಿ ತಂದಂತಾಗುತ್ತದೆ. ದೇಶಾದ್ಯಂತ ಇರುವ ಎಲ್ಲ ಸ್ಮಾರ್ಟ್ ಸಿಟಿಗಳ ಸಿಬ್ಬಂದಿಯನ್ನು ಉಳಿಸಿ ಅವರನ್ನು ಅವರ ಪರಿವಾರವನ್ನು ಸಂರಕ್ಷಿಸುವುದು ಮಹಾಮಂಡಳದ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.