ಹು-ಧಾ ಸ್ಮಾರ್ಟ್​ಸಿಟಿಗೆ ಪ್ರಥಮ ಪ್ರಶಸ್ತಿ

SMART CITY NEW
Published on

ಹುಬ್ಬಳ್ಳಿ : ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ 2022ರ ಇಂಡಿಯಾ ಸ್ಮಾರ್ಟ್​ಸಿಟಿಸ್ ಅವಾರ್ಡ್ ಕಾಂಟೆಸ್ಟ್​ನಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿಗೆ ನವೀನ ಆವಿಷ್ಕಾರ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಲಭಿಸಿದೆ.

ಹುಬ್ಬಳ್ಳಿಯಲ್ಲಿ ಹರಿಯುವ ನಾಲಾಕ್ಕೆ ಸ್ಮಾರ್ಟ್​ಸಿಟಿ ಯೋಜನೆಯಡಿ ಹೊಸ ರೂಪ ನೀಡಲಾಗಿದೆ. ನಾಲಾ ನೀರು ಹರಿಯುವ ಮಾರ್ಗ ಬದಲಾಯಿಸುವ ಜತೆಗೆ ನಾಲಾ ಮೇಲ್ಭಾಗದಲ್ಲಿ ಸೈಕಲ್ ಪಾಥ್, ಹಸಿರು ತೋಟ ಸೇರಿದಂತೆ ವಿವಿಧ ರೂಪ ನೀಡಲಾಗಿದೆ. ಇಡೀ ದೇಶದಲ್ಲಿ ನಾಲಾವೊಂದಕ್ಕೆ ಹೊಸ ರೂಪ ನೀಡಿದ್ದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿಗೆ ‘ಇನ್ನೋವೇಷನ್ ಅವಾರ್ಡ್ : ಇನ್ನೋವೇಟಿವ್ ಐಡಿಯಾ’ದ ಪ್ರಥಮ ಪ್ರಶಸ್ತಿ ಲಭಿಸಿದೆ.

ದೇಶದ 100 ಸ್ಮಾರ್ಟ್​ಸಿಟಿ ನಗರಗಳಲ್ಲಿ 40 ನಗರಗಳು ಈ ವಿಭಾಗದಲ್ಲಿ ಸ್ಪರ್ಧೆ ನಡೆಸಿದ್ದು, 70 ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಅವುಗಳಲ್ಲಿ ಹು-ಧಾ ಸ್ಮಾರ್ಟ್​ಸಿಟಿಗೆ ಪ್ರಥಮ ಪ್ರಶಸ್ತಿ ಸಿಕ್ಕಿದೆ.

ಸೆಪ್ಟೆಂಬರ್​ನಲ್ಲಿ ಇಂದೋರ್​ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಅವರು ರಾಷ್ಟ್ರಪತಿ ದ್ರೌಪದಿ ಮುಮು ಅವರಿಂದ ಪ್ರಶಸ್ತಿ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net