ಸ್ಮಾರ್ಟ್ ಸಿಟಿಯಲ್ಲಿ ಬಸ್ ತಂಗುದಾಣ ಕೊರತೆ ಬಿಸಿಲು, ಮಳೆಗೆ ಪ್ರಯಾಣಿಕರು ಹೈರಾಣು

Mng-mar8-ambedkar circle1
Published on

ಹರೀಶ್ ಮೋಟುಕಾನ


ಮಂಗಳೂರು; ನಗರದಲ್ಲಿ ಕೆಲವು ಕಡೆ ಅನಗತ್ಯ ಎರಡು, ಮೂರು ಬಸ್ ತಂಗುದಾಣ, ಹೆಚ್ಚು ಪ್ರಯಾಣಿಕರು ನಿಲ್ಲುವಲ್ಲಿ ತಂಗುದಾಣವೇ ಇಲ್ಲ. ಬಿಸಿಲು, ಮಳೆಗೆ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸ್ಮಾರ್ಟ್‌ಸಿಟಿಗೆ ಕಪ್ಪು ಚುಕ್ಕೆಯಾಗಿದೆ.
ಪ್ರಮುಖವಾಗಿ ನಗರದ ಹೃದಯ ಭಾಗದಲ್ಲೇ ಬಸ್ ತಂಗುದಾಣ ಇಲ್ಲ. ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಬರುವ ರಸ್ತೆಯಲ್ಲಿ ನೂರಾರು ಮಂದಿ ಬಸ್‌ಗೆ ಕಾಯುತ್ತಾರೆ. ಆದರೆ ಇಲ್ಲಿ ಬಸ್ ತಂಗುದಾಣ ಇಲ್ಲ. ಇಲ್ಲಿ ನಿರಂತರವಾಗಿ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಮಳೆಗಾಲದಲ್ಲಿ ಮಳೆಗೆ ಒದ್ದೆಯಾಗಿಕೊಂಡು, ಬೇಸಿಗೆಯಲ್ಲಿ ಬಿಸಿಲಿಗೆ ಒಣಗುತ್ತಾ ಬಸ್‌ಗೆ ಕಾಯಬೇಕಾದ ಸ್ಥಿತಿ ಇದೆ.
ಬಳ್ಳಾಲ್‌ಭಾಗ್, ಪಿವಿಎಸ್ ಜಂಕ್ಷನ್, ಕೆ.ಎಸ್.ರಾವ್ ರಸ್ತೆ, ಯೆಯ್ಯಡಿ, ಬಿಜೈ, ವೆನ್ಲಾಕ್ ಬಳಿ, ಬೆಸೆಂಟ್ ಕಾಲೇಜು ಬಳಿ, ವೆಲೆನ್ಸಿಯಾ ಮೊದಲಾದ ಕಡೆ ಬಸ್ ತಂಗುದಾಣಗಳಿಲ್ಲ. ಆದರೂ ಸಾರ್ವಜನಿಕರು ಲೇಡಿಹಿಲ್, ಕದ್ರಿ ಮೊದಲಾದ ಕಡೆ ಎರಡು, ಮೂರು ಬಸ್ ತಂಗುದಾಣಗಳಿವೆ. ಅಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ. ಸಾರ್ವಜನಿಕರ ಬವಣೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಿಸದೇ ಇರುವುದು ವಿಪರ‌್ಯಾಸ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಗರಿಕರು, ಮಗುವನ್ನು ಎತ್ತಿಕೊಂಡ ಮಹಿಳೆಯರಿಗೆ ಬಸ್ ತಂಗುದಾಣ ಇಲ್ಲದೇ ಇರುವುದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಬಿಸಿಲಿಗೆ ನಿಂತುಕೊಂಡೇ ಬಸ್‌ಗೆ ಕಾಯುವ ಸ್ಥಿತಿ ಇದೆ. ಅಲ್ಲಿರುವ ಹೊಟೇಲ್ ಕಟ್ಟಡದ ಒಳಗೆ ಹೋಗಿ ನಿಂತರೆ ಬಸ್ ಬರುವುದು ಕಾಣುವುದಿಲ್ಲ. ಹಿರಿಯ ನಾಗರಿಕರು ರಸ್ತೆ ಬದಿಗೆ ಬರುವಷ್ಟರಲ್ಲಿ ಬಸ್ ಅಲ್ಲಿಂದ ತೆರಳಿರುತ್ತದೆ. ಬಳ್ಳಾಲ್‌ಭಾಗ್‌ನಲ್ಲಿ ಫುಟ್‌ಪಾತ್ ಮೇಲೆ ನಿಂತುಕೊಂಡು ಬಸ್‌ಗೆ ಕಾಯುವುದು ಸಾಮಾನ್ಯವಾಗಿದೆ. ‘ಇಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ‘ಅಲ್ಲೇ ಸಮೀಪದಲ್ಲಿ ಜಾಗ ಇರುವಲ್ಲಿ ತಂಗುದಾಣ ನಿರ್ಮಾಣಕ್ಕೆ ಅವಕಾಶ ಇದೆಯಲ್ಲ’ ಎಂದರೆ ಅದಕ್ಕೆ ಉತ್ತರ ಇಲ್ಲ.

ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಬಂಟ್ಸ್‌ಹಾಸ್ಟೇಲ್‌ಗೆ ಬರುವ ರಸ್ತೆ ಬದಿಯಲ್ಲಿ ದಿನವಿಡೀ ಪ್ರಯಾಣಿಕರು ಬಸ್‌ಗೆ ಕಾಯುತ್ತಾರೆ. ಅದರಲ್ಲೂ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಸ್ಥಳೀಯ ಆಡಳಿತ ಸ್ಪಂದಿಸಿ ಆದಷ್ಟು ಬೇಗ ಇಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು.
ಗೋಪಾಲ ಕಾಮತ್
ಹಿರಿಯ ನಾಗರಿಕ


ನಗರದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮನಪಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕು. ಕೆಲವೊಂದು ಕಡೆ ತಂಗುದಾಣ ನಿರ್ಮಾಣಕ್ಕೆ ವಿರೋಧ ಇರುವಲ್ಲಿ ಮಾತುಕತೆ ಮೂಲಕ ಅವರ ಮನವೊಲಿಸುವ ಪ್ರಯತ್ನ ಆಗಬೇಕಾಗಿದೆ.
ಜಯಾನಂದ ಅಂಚನ್
ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net