

ಬೆಳಗಾವಿ : ನಗರದ ಶಹಾಪುರನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ದಿಂದ ಹಳೆ ಪಿ.ಬಿ.ರಸ್ತೆಯ ವರೆಗೆ ಸಿಡಿಪಿ ಪ್ರಕಾರ 80 ಫೂಟ್ ರಸ್ತೆ ಮಾಡುವ ವೇಳೆ ಅಗಲೀಕರಣ ಮಾಡವ ಸಂದರ್ಭದಲ್ಲಿ ವ್ಯತ್ಯಾಸವಾಗಿದ್ದು, ಬಿಜೆಪಿ ನಾಯಕರ ಮಂಗಲ ಕಾರ್ಯಾಲಯಕ್ಕೆ ರಸ್ತೆ ಹೊಂದಾಣಿಕೆಯಾಗಬೇಕೆಂದು ಯೋಜನೆಯಲ್ಲಿ ಏರುಪೇರು ಮಾಡಿದ್ದಾರೆ. ಇದಕ್ಕೆ ಹೈಕೋರ್ಟ್ ಆದೇಶದ ಪ್ರಕಾರ ಸ್ಮಾರ್ಟ್ ಸಿಟಿ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ.
ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ. ರಸ್ತೆಯ ನಿರ್ಮಾಣದಲ್ಲಿ ಸಾಕಷ್ಟು ಲೋಪದೋಷವಾಗಿದೆ. ರಸ್ತೆ ಅಗಲಿಕರಣ ಮಾಡುವುದು ಸ್ಮಾರ್ಟ್ ಸಿಟಿಯವರೆಗೆ ಏನು ಸಂಬಂಧ ? ರಸ್ತೆ ಅಗಲೀಕರಣ ಬೆಳಗಾವಿ ಮಹಾನಗರ ಪಾಲಿಕೆ ಮಾಡಬೇಕು. ಸ್ಮಾರ್ಟ್ ಸಿಟಿಯಲ್ಲಿನ ಅನುದಾನ ಹೆಚ್ಚಿರುವುದರಿಂದ ಸ್ಥಳೀಯ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ತಮಗೆ ಬೇಕಾದ ಹಾಗೆ ಕೆಲಸ ಮಾಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿಯ ಪ್ರತಿಯೊಂದು ಕಾಮಗಾರಿ ನೀಲ ನಕ್ಷೆ ಸಿದ್ದಪಡಿಸುವುದು ಪಿಎಂಸಿ ಟ್ರ್ಯಾಕ್ ಬೆಲ್ ಇಂಡಿಯಾ. ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ದಕ್ಷಿಣ ವಲಯದ ಕಾರ್ಯ ನಿರ್ವಾಹಕ ಅಭಿಯಂತರ ಅಜೀತ ಪಾಟೀಲ ಹಾಗೂ ಅಂದಿನ ಸ್ಮಾರ್ಟ್ ಸಿಟಿ ಎಂಡಿ ಇದಕ್ಕೆ ನೇರವಾಗಿ ಹೊಣೆಗಾರರಾಗುತ್ತಾರೆ. ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಸ್ಮಾರ್ಟ್ ಸಿಟಿಗೆ ಅರ್ಥಿಕವಾಗಿ ನಷ್ಟ ಮಾಡಿದ್ದಲ್ಲದೆ, ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಆಸ್ತಿ, ಪಾಸ್ತಿ ಹಾನಿಯಾದವರಿಗೆ ಪರಿಹಾರ ಕೊಡಬೇಕು ಎಂದು ಟೋಪಣ್ಣವರ ಆಗ್ರಹಿಸಿದ್ದಾರೆ.