

ತುಮಕೂರು : ಸ್ಮಾರ್ಟ್‌ಸಿಟಿ ಬಂಡವಾಳ ಬಯಲಾಗಲಿದೆ ಎಂಬ ಕಾರಣಕ್ಕೆ ಮಾಧ್ಯಮಗಳನ್ನು ದೂರವಿಟ್ಟು ಸಮಾರಂಭ ನಡೆಸಲಾಗಿದೆ. ತುಮಕೂರಿಗರು ಪ್ರತಿನಿತ್ಯ ಕಾಮಗಾರಿಯಿಂದ ಅನುಭವಿಸುತ್ತಿರುವ ವಾಸ್ತವ ಚಿತ್ರಣ ಮುಚ್ಚಿಟ್ಟು ಬಣ್ಣಬಣ್ಣದ ಕಟ್ಟಡಗಳ ಸ್ಲೈಡ್ ಶೋ ತೋರಿಸಿ ಅಧಿಕಾರಿಗಳು ರಾಜ್ಯ ಸರ್ಕಾರದ ಅಪರ ಕಾರ್ಯದರ್ಶಿ ಡಾ.ಅಮಿತಪ್ರಸಾದ್ ಶಬ್ಬಾಸ್‌ಗಿರಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಸ್ತುಸ್ಥಿತಿ ಮರೆಮಾಚಲು ಶುಕ್ರವಾರ ಪಾಲಿಕೆ ಆವರಣದದಲ್ಲಿ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸಂಯೋಜಿತ ಆದೇಶ ನಿಯಂತ್ರಣ ಕೇಂದ್ರದ ಪರಿಚಯ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ಆಹ್ವಾನಿಸಿರಲಿಲ್ಲ. ಇದಲ್ಲದೆ ವಾರ್ತಾ ಇಲಾಖೆಗೂ ಮಾಹಿತಿ ನೀಡದೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮುಖ ಉಳಿಸಿಕೊಂಡಿದ್ದಾರೆ.
ಪ್ರತಿಪಕ್ಷಗಳಿಗೂ ಆಹ್ವಾನ ಇಲ್ಲ: ಸಮಾರಂಭಕ್ಕೆ ಪಾಲಿಕೆಯ ಪ್ರತಿಪಕ್ಷಗಳ ಸದಸ್ಯರಿಗೂ ಆಹ್ವಾನ ನೀಡಿರಲಿಲ್ಲ. ಇದು ಅಕ್ಷರಷಃ ಗೌಪ್ಯ ಸಭೆಯಂತೆ ನಡೆದಿದ್ದು ಹುಳುಕುಗಳು ಎಲ್ಲಿ ಬಯಲಾಗಲಿವೆ ಎಂಬ ಭೀತಿಯಿಂದ ಸ್ಮಾರ್ಟ್‌ಸಿಟಿ ಎಂಡಿ ಬಿ.ಟಿ.ರಂಗಸ್ವಾಮಿ ಸಮಾರಂಭ ನಡೆಯುತ್ತಿರುವ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಸ್ಮಾರ್ಟ್‌ಸಿಟಿಯಲ್ಲಿ ಹಗಲು ದರೋಡೆ, ಕಳಪೆ ಕಾಮಗಾರಿ, ಕಮೀಷನ್ ದಂಧೆ ಜೋರಾಗಿ ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಜನಪ್ರತಿನಿಧಿಗಳಲ್ಲದೆ, ಆಡಳಿತಾರೂಢ ಬಿಜೆಪಿ ಮುಖಂಡರು ಬಹಿರಂಗವಾಗಿ ಆರೋಪಗಳ ಸುರಿಮಳೆಗೈದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಹ ಇಲ್ಲಿ ನಡೆಯುತ್ತಿರುವ ಅರಾಜಕತೆ ಬಗ್ಗೆ ತುಟಿಬಿಚ್ಚದೆ ಮೌನವಹಿಸಿದ್ದರು. ಇದನ್ನೆಲ್ಲ ಮರೆಮಾಚಿ ಅಮಿತಾ ಪ್ರಸಾದ್ ಅವರಿಗೆ ಪ್ರಾತ್ಯಕ್ಷಿಕೆಯಲ್ಲಿ ತುಮಕೂರಿಗೆ ‘ಸ್ವರ್ಗವನ್ನೇ ಧರೆ’ಗಿಳಿಸಿರುವ ಚಿತ್ರಣ ತೋರಿಸಿದ್ದಾರೆ. ಸ್ಮಾರ್ಟ್‌ಸಿಟಿ ಸ್ಲೈಡ್ ಶೋ ನೋಡಿ ಖುಷಿಯಾದ ಅಮಿತಾಪ್ರಸಾದ್, ಸ್ಮಾರ್ಟ್‌ಸಿಟಿ ಅಧಿಕಾರಿಗಳೇ ಮುಜುಗರಕ್ಕೊಳಗಾಗುವಂತೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.
‘ಕೋಟ್ಯಂತರ ರೂಪಾಯಿ ಸ್ಮಾರ್ಟ್ ಅವ್ಯವಹಾರ’ ನಡೆದಿರುವುದನ್ನು ಇತ್ತೀಚೆಗೆ ವಿಜಯವಾಣಿ ಬಯಲಿಗೆಳೆದಿತ್ತು. ವಿಳಂಬ, ಕಳಪೆ ಕಾಮಗಾರಿ ಬಗ್ಗೆ ಜನರೂ ಸಹ ಹಿಡಿಶಾಪ ಹಾಕುತ್ತಿದ್ದರು. ವಾಸ್ತವ ಚಿತ್ರಣದ ಅರಿವಿಲ್ಲದ ಅಪರ ಕಾರ್ಯದರ್ಶಿಗೆ ಮಂಕುಬೂದಿ ಎರಚಲಾಯಿತು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಪಾಲಿಕೆ ಆಯುಕ್ತೆ, ರೇಣುಕಾ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳ ದಂಡೇ ಇತ್ತು.
ಫ್ಲೈಯಿಂಗ್ ವಿಸಿಟ್: ಕಾರ್ಯಕ್ರಮಕ್ಕೂ ಮುನ್ನ ಮಾರಿಯಮ್ಮ ನಗರದಲ್ಲಿ ನಿರ್ಮಾಣವಾಗಿರುವ ವಸತಿ ಸಮುಚ್ಛಯ ಪರಿಶೀಲಿಸಿ ಅಶೋಕ ರಸ್ತೆಯಲ್ಲಿನ ಎಂಪ್ರೆಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಿರುವ ಡಿಜಿಟಲ್ ಲೈಬ್ರರಿ ಕಟ್ಟಡವನ್ನು ಡಾ.ಅಮಿತಾ ಪ್ರಸಾದ್ ಪರಿಶೀಲಿಸಿ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಡಿಹೊಗಳಿದ ಅಪರ ಕಾರ್ಯದರ್ಶಿ : ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿವೆ. ಉತ್ತಮ ರಸ್ತೆಗಳು, ಕ್ರೀಡಾಂಗಣ, ಡಿಜಿಟಲ್ ಲೈಬ್ರರಿ, ಸಂಚಾರಿ ನಿಯಂತ್ರಣದ ಸಿಗ್ನಲ್‌ಗಳು ಹೀಗೆ ಹತ್ತು ಹಲವು ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿವೆ. ಇಲ್ಲಿ ನಡೆಯುತ್ತಿರುವ ಸ್ಮಾರ್ಟ್ ಕಾಮಗಾರಿಗಳ ನಿರ್ವಹಣೆಯನ್ನು ಸ್ಮಾರ್ಟ್‌ಸಿಟಿ ಯೋಜನಾಧಿಕಾರಿ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಅಪರ ಕಾರ್ಯದರ್ಶಿ ಅಮಿತಾ ಪ್ರಸಾದ್ ಹಾಡಿಹೊಗಳಿದರು.
ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂಧಪಟ್ಟ ಕೆಲವು ಕಾಮಗಾರಿಗಳು ಕರೊನಾ ಹಿನ್ನೆಲೆಯಲ್ಲಿ ಕೆಲಸಗಾರರಿರಲ್ಲದೆ ವಿಳಂಬವಾಗಿದ್ದವು. ಅವೂ ಈಗ ಪ್ರಗತಿಯ ಹಂತದಲ್ಲಿವೆ. ಬಹುತೇಕ ಕಾಮಗಾರಿಗಳು ಇನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ ಎಲ್ಲಿ ಮಾಹಿತಿ ಕೊಟ್ಟರೆ ಕಳ್ಳತನ ಬಯಲಾಗುವ ಭೀತಿಯಿಂದ ಯಾರಿಗೂ ಆಹ್ವಾನ ಕೊಟ್ಟಿಲ್ಲ. ಕದ್ದುಮುಚ್ಚಿ ಸಮಾರಂಭ ಮಾಡಿ ಹುಳುಕು ಹಾಗೂ ಲೂಟಿ ಹೊಡೆಯುತ್ತಿರುವುದನ್ನು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮುಚ್ಚಿಕೊಂಡಿದ್ದಾರೆ. ಇದು ನಿಜಕ್ಕೂ ಅನ್ಯಾಯ. ಜೆ.ಕುಮಾರ್ ಪ್ರತಿಪಕ್ಷ ನಾಯಕ, ಪಾಲಿಕೆ